ನವದೆಹಲಿ: ರಸ್ತೆ ಅಪಘಾತಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾವುಗಳ ಪ್ರಮಾಣವನ್ನು 2025ರ ಒಳಗಾಗಿ ಶೇ.50 ರಷ್ಟು ಇಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ 'ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ' ಅಭಿಯಾನವನ್ನ ಉದ್ಘಾಟಿಸಿ ಮಾತನಾಡಿದ ಗಡ್ಕರಿ, ನಾವು 2030ರ ವರೆಗೆ ಕಾಯುತ್ತಿದ್ದರೆ 6 ರಿಂದ 7 ಲಕ್ಷ ಜನರು ಕೇವಲ ರಸ್ತೆ ಅಪಘಾತಗಳಲ್ಲೇ ಸಾಯುತ್ತಾರೆ. ಆದ್ದರಿಂದ ಜನರ ಸಹಾಯದೊಂದಿಗೆ ಈ ಸಂಖ್ಯೆಯನ್ನು 2025ರ ಒಳಗಾಗಿ ಶೇ.50 ರಷ್ಟು ತಗ್ಗಿಸುವ ಗುರಿಯಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾರ್-ಬೈಕ್ ನಡುವೆ ಡಿಕ್ಕಿ ; ಸ್ಥಳದಲ್ಲೇ ಮೃತಪಟ್ಟ ಸವಾರರು!
ಇದೇ ವೇಳೆ ಸಚಿವಾಲಯದ ಸಾಧನೆಗಳನ್ನು ಹೈಲೈಟ್ ಮಾಡಿದ ಅವರು, ನಾವು ದಿನಕ್ಕೆ 30 ಕಿ.ಮೀ ರಸ್ತೆ ನಿರ್ಮಿಸುವ ಗುರಿ ಸಾಧಿಸಿದ್ದೇವೆ. ಮಾರ್ಚ್ ಅಂತ್ಯದ ವೇಳೆಗೆ ದಿನಕ್ಕೆ 40 ಕಿ.ಮೀ ರಸ್ತೆ ನಿರ್ಮಿಸುವ ಗುರಿಯನ್ನು ಸಾಧಿಸಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಮತ್ತು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಕೂಡ ಭಾಗವಹಿಸಿದ್ದರು.