ಲಖನೌ : ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಸತೀಶ್ ಪ್ರಧಾನ್ ಅವರ ಹೇಳಿಕೆಯನ್ನು ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ದಾಖಲಿಸಿಕೊಂಡಿದೆ.
ಸಿಆರ್‌ಪಿಸಿಯ ಸೆಕ್ಷನ್ 313ರಡಿ ಹೇಳಿಕೆಗಳನ್ನು ದಾಖಲಿಸುವ ವಿಡಿಯೋ ಲಿಂಕ್ ಸೌಲಭ್ಯ ಈಗ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಆರೋಪಿ ಸತೀಶ್ ಪ್ರಧಾನ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವಿಶೇಷ ನ್ಯಾಯಾಧೀಶ ಎಸ್ ಕೆ ಯಾದವ್ ತಿಳಿಸಿದ್ದಾರೆ. ಜುಲೈ 21ರಂದು ಸೋನಿಪತ್ ಜೈಲಿನಿಂದ ಮತ್ತೊಬ್ಬ ಆರೋಪಿ ರಾಮ್ ಚಂದ್ರ ಖತ್ರಿ ಅವರ ಹೇಳಿಕೆಯನ್ನು ದಾಖಲಿಸುವುದಾಗಿ ನ್ಯಾಯಾಲಯ ಹೇಳಿದೆ. ಮತ್ತೊಂದು ಪ್ರಕರಣದಲ್ಲಿ ಖತ್ರಿ ಜೈಲಿನಲ್ಲಿದ್ದಾನೆ.
ನ್ಯಾಯಾಲಯವು ಜುಲೈ 18ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಆದರೆ, ರಾಜ್ಯದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯವ್ಯಾಪಿ ಲಾಕ್‌ಡೌನ್ ಮಾಡುತ್ತಿರುವುದರಿಂದ ನ್ಯಾಯಾಲಯವೂ ದಿನಾಂಕವನ್ನು ಬದಲಾಯಿಸಿತು. ಧರ್ಮಸೇನ ರಾಷ್ಟ್ರೀಯ ಅಧ್ಯಕ್ಷ ಆರೋಪಿ ಸಂತೋಷ್ ದುಬೆ ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯವು ಈಗಾಗಲೇ ಜುಲೈ16ರನ್ನು ನಿಗದಿಪಡಿಸಿದೆ.
32 ಆರೋಪಿಗಳ ಪೈಕಿ ವಿಶೇಷ ನ್ಯಾಯಾಲಯವು ಈಗಾಗಲೇ 25 ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿದೆ. ಮಾಜಿ ಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಮುಖಂಡ ಎಂ ಎಂ ಜೋಶಿ ಮತ್ತು ಇತರ ಕೆಲವು ಆರೋಪಿಗಳು ಇನ್ನೂ ನ್ಯಾಯಾಲಯದಲ್ಲಿ ಹಾಜರಾಗಬೇಕಿದೆ.