ಗುವಾಹಟಿ: ಅಸ್ಸೋಂನಲ್ಲಿ ಪ್ರವಾಹ ರೌದ್ರಾವತಾರ ತಾಳಿದೆ. ಮೃತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಭೂಕುಸಿತದಿಂದಾಗಿ ಈವರೆಗೆ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಮಾಹಿತಿ ನೀಡಿದೆ.
ರಾಜ್ಯದ 33 ಜಿಲ್ಲೆಗಳ ಸುಮಾರು 36 ಲಕ್ಷ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು, ರಸ್ತೆಗಳು, ಬೆಳೆಗಳು, ಬ್ರಿಡ್ಜ್ಗಳು ಜಲಾವೃತವಾಗಿವೆ. ಕಳೆದ 24 ಗಂಟೆಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 511 ಮಂದಿಯನ್ನು ಎನ್ಡಿಆರ್ಎಫ್ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ರಕ್ಷಿಸಿದ್ದಾರೆ.
ವಿಶ್ವ ಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಶೇ.95 ರಷ್ಟು ಮುಳುಗಡೆಯಾಗಿದ್ದು, 9 ಖಡ್ಗಮೃಗಗಳು, 4 ಕಾಡೆಮ್ಮೆಗಳು, 7 ಕಾಡು ಹಂದಿಗಳು, 84 ಜಿಂಕೆಗಳು ಸೇರಿ ಒಟ್ಟು 108 ಪ್ರಾಣಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಮತ್ತು ಎಎಸ್‌ಡಿಎಂಎ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಅನೇಕ ಪ್ರಾಣಿಗಳು ಅಪಾಯದಲ್ಲಿ ಸಿಲುಕಿವೆ.
ಬ್ರಹ್ಮಪುತ್ರ, ಧನ್ಸಿರಿ, ಜಿಯಾಭರಲಿ, ಕೋಪಿಲಿ, ಬೆಕಿ, ಬರಾಕ್ ಮತ್ತು ಕುಶಿಯಾರಾ ಈ ಆರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸುತ್ತಲಿನ 12 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗಿದೆ. 28 ಜಿಲ್ಲೆಗಳಲ್ಲಿ 711 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 51,500 ಜನರಿಗೆ ಆಶ್ರಯ ನೀಡಲಾಗುತ್ತಿದೆ.
36 ಲಕ್ಷ ಪ್ರವಾಹ ಪೀಡಿತ ಜನರ ಪೈಕಿ ಧುಬ್ರಿ, ಗೋಲ್ಪಾರ, ಬಾರ್ಪೆಟಾ ಹಾಗೂ ಮೊರಿಗಾಂವ್ - ಈ ನಾಲ್ಕು ಜಿಲ್ಲೆಗಳಲ್ಲೇ ಸುಮಾರು 22 ಲಕ್ಷ ಜನರಿದ್ದಾರೆ.