ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಐಸಿಸ್ (ISIS) ಉಗ್ರನನ್ನು ಬಂಧಿಸಿ, ಭಾರಿ ಪ್ರಮಾಣದ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ದೆಹಲಿಯ ರಿಡ್ಜ್ ರಸ್ತೆಯ ಧೌಲಾ ಕುವಾನ್ ಮತ್ತು ಕರೋಲ್ ಬಾಗ್ ಪ್ರದೇಶದಲ್ಲಿ ಉಗ್ರನಿರುವ ಸಂಶಯದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ, ಈ, ವೇಳೆ ಉಗ್ರ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್ಕೌಂಟರ್ ಬಳಿಕ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ ಎಂದು ವಿಶೇಷ ಘಟಕದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹ ಮಾಹಿತಿ ನೀಡಿದ್ದಾರೆ.
ಉಗ್ರನನ್ನು ಲೋಧಿ ಕಾಲೊನಿಯ ಪೊಲೀಸ್ ವಿಶೇಷ ಘಟಕದ ಕಚೇರಿಗೆ ಕರೆತರಲಾಗಿದ್ದು, ವಶಪಡಿಸಿಕೊಳ್ಳಲಾಗಿದ್ದ ಐಇಡಿಗಳನ್ನು ಎನ್‌ಎಸ್‌ಜಿ ಕಮಾಂಡೋಗಳು ನಿಷ್ಕ್ರಿಯಗೊಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕಮಾಂಡೋಗಳು ದೆಹಲಿಯ ರಿಡ್ಜ್ ರಸ್ತೆ ಪ್ರದೇಶದ ಬುದ್ಧ ಜಯಂತಿ ಪಾರ್ಕ್ ಬಳಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.