ನವದೆಹಲಿ : ಗಡಿ ಮತ್ತು ಗಡಿಯೊಳಗೂ ಶೌರ್ಯದಿಂದ ಹೋರಾಡಿದ ವೀರಯೋಧರನ್ನು ಗೌರವಿಸಲು ಪ್ರತಿ ವರ್ಷ ಡಿಸೆಂಬರ್ 7ರಂದು 'ಸಶಸ್ತ್ರ ಪಡೆಗಳ ಧ್ವಜ ದಿನ'ವನ್ನಾಗಿ ಆಚರಿಸಲಾಗುತ್ತದೆ.
ಈ ದಿನ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ಸಲ್ಲಿಸಿದ ಸೇವೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಈ ಧ್ವಜದ ಕೆಂಪು, ಗಾಢ ನೀಲಿ ಮತ್ತು ತಿಳಿ ನೀಲಿ ಬಣ್ಣಗಳು ಕ್ರಮವಾಗಿ ಭಾರತೀಯ ಭೂ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆ ಪ್ರತಿನಿಧಿಸುತ್ತವೆ.
1949ರಿಂದ, ಪ್ರತಿವರ್ಷ ಡಿಸೆಂಬರ್ 7ರಂದು ಹುತಾತ್ಮರನ್ನು ಮತ್ತು ಸಮವಸ್ತ್ರದಲ್ಲಿರುವ ಸೈನಿಕರನ್ನು ಗೌರವಿಸಲು ದೇಶಾದ್ಯಂತ ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ. ಮತ್ತು ದೇಶದ ಗೌರವವನ್ನು ಕಾಪಾಡಲು ನಮ್ಮ ಗಡಿಗಳಲ್ಲಿ ಇವರು ನಿರಂತರ ಹೋರಾಟ ನಡೆಸುತ್ತಲೇ ಇದ್ದಾರೆ. ಸೈನಿಕರು ಯಾವುದೇ ''ದೇಶದ ಮಹತ್ವದ ಆಸ್ತಿಗಳಲ್ಲಿ ಒಬ್ಬರು'' ಅವರು ರಾಷ್ಟ್ರ ರಕ್ಷಕರು ಮತ್ತು ದೇಶದ ನಾಗರಿಕರ ರಕ್ಷಣೆಗೆಂದೇ ಪಣ ತೊಟ್ಟವರು.
ಕರ್ತವ್ಯಕ್ಕೋಸ್ಕರ ತಮ್ಮ ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ತ್ಯಾಗ ಮಾಡಿದ ಮಹಾನ್ ತ್ಯಾಗಿಗಳು. ತಾಯ್ನಾಡಿನ ಸೇವೆ ಮಾಡುತ್ತಾ, ಕಡೆಗೆ ತಮ್ಮ ಪ್ರಾಣವನ್ನೇ ಅರ್ಪಿಸುವ ವೀರರಿಗೆ ದೇಶವು ಎಂದಿಗೂ ಚಿರರುಣಿಯಾಗಿರುತ್ತದೆ. ಕರ್ತವ್ಯ ನಿರ್ವಹಿಸುತ್ತಲೇ ತಾಯ್ನಾಡಿನ ಉಳಿವಿಗಾಗಿಯೇ ಪ್ರಾಣತೆತ್ತ ಹುತಾತ್ಮ ವೀರರ ಬಗ್ಗೆ ಮಾತ್ರವಲ್ಲದೆ ಈ ತ್ಯಾಗದ ನಿರ್ಣಾಯಕ ಭಾಗವಾಗಿರುವ ಅವರ ಕುಟುಂಬಗಳ ಬಗ್ಗೆಯೂ ನಮ್ಮ ಕಾಳಜಿ ಹಾಗೂ ಮೆಚ್ಚುಗೆ ತೋರಿಸುವುದು ನಮ್ಮ ಕರ್ತವ್ಯ.
ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರಗಳು ಯೋಧರಿಗೆ ನೀಡಿರುವ ಸೌಲಭ್ಯಗಳ ಹೊರತಾಗಿಯೂ ಸೈನಿಕರಿಗೆ ಸ್ವಯಂಪ್ರೇರಿತವಾಗಿ ನಮ್ಮ ಬೆಂಬಲ, ಪುನರ್ವಸತಿ ಸೌಲಭ್ಯ ಮತ್ತು ಹಣಕಾಸಿನ ನೆರವು ನೀಡುವಲ್ಲಿ ಕೊಡುಗೆ ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಕರ್ತವ್ಯವಾಗಿದೆ. ಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದ ಸೈನಿಕರು, ವೀರ ನಾರಿಯರು ಮತ್ತು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಕುಟುಂಬಗಳನ್ನು ನೋಡಿಕೊಳ್ಳುವ ನಮ್ಮ ಬದ್ಧತೆಯನ್ನು ಈ ಧ್ವಜ ದಿನವು ಮುಂಚೂಣಿಗೆ ತರುತ್ತದೆ.
ಸಶಸ್ತ್ರ ಪಡೆಗಳ ಧ್ವಜ ದಿನ ಇತಿಹಾಸ : ಭಾರತ ರಕ್ಷಣಾ ಸಚಿವಾಲಯದ ಅಡಿಯಲ್ಲಿ 1949ರ ಆಗಸ್ಟ್ 28ರಂದು ರಚಿಸಲಾದ ಸಮಿತಿಯಲ್ಲಿ ಡಿಸೆಂಬರ್ 7ರಂದು ಸಶಸ್ತ್ರ ಧ್ವಜ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಇದರ ಉದ್ದೇಶ ಸಣ್ಣ ಧ್ವಜಗಳು, ಬ್ಯಾಡ್ಜ್ಗಳು, ಸ್ಟಿಕರ್ಗಳು ಮತ್ತು ಇತರ ವಸ್ತುಗಳನ್ನು ವಿತರಿಸಲು ಹಣ ಸಂಗ್ರಹಿಸುವುದಾಗಿತ್ತು.
ಧ್ವಜ ದಿನದ ಪ್ರಮುಖ ಮೂರು ಉದ್ದೇಶಗಳು:
- ಸೈನ್ಯದಲ್ಲಿರುವವರ ಮತ್ತು ಅವರ ಕುಟುಂಬಗಳ ಕಲ್ಯಾಣಾಭಿವೃದ್ಧಿ
- ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳ ಪುನರ್ವಸತಿ ಮತ್ತು ಕಲ್ಯಾಣ
- ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಪುನರ್ವಸತಿ ಕಲ್ಪಿಸುವುದು
ಅಕ್ಟೋಬರ್ 15, 2020 ರಂದು ಸಶಸ್ತ್ರ ಪಡೆಗಳ ಧ್ವಜ ದಿನ ನಿಧಿಗೆ ಕೊಡುಗೆ ನೀಡುವಂತೆ ರಕ್ಷಣಾ ಸಚಿವಾಲಯ ಸಾರ್ವಜನಿಕರಿಗೆ ಮನವಿ :
ಮಾಜಿ ಸೈನಿಕರ ಕಲ್ಯಾಣ ಇಲಾಖೆ, ರಕ್ಷಣಾ ಸಚಿವಾಲಯವು ಯುದ್ಧದಲ್ಲಿ ಸಾವನ್ನಪ್ಪಿದ ಯೋಧರ ಪತ್ನಿಯರರಿಗೆ ಪರಿಹಾರ ಧನ, ಹುತಾತ್ಮ ಸೈನಿಕರ ವಾರ್ಡ್‌ಗಳು ಮತ್ತು ಮಾಜಿ ಸೈನಿಕರ (ಇಎಸ್‌ಎಂ) ಕಲ್ಯಾಣ ಮತ್ತು ಪುನರ್ವಸತಿಗಾಗಿ ಕೆಲಸ ಮಾಡುತ್ತಿದೆ. ಸೈನಿಕರ ಮಕ್ಕಳ ಶಿಕ್ಷಣಕ್ಕೆ ಅನುದಾನ, ಸೈನಿಕರ ಅಂತ್ಯಕ್ರಿಯೆಯ ಅನುದಾನ, ವೈದ್ಯಕೀಯ ಅನುದಾನ ಮತ್ತು ಅನಾಥ / ಅಂಗವಿಕಲ ಮಕ್ಕಳಿಗೆ ಅನುದಾನ ಇತ್ಯಾದಿ ಸೌಲಭ್ಯ ನೀಡುತ್ತಿವೆ.
ಇದಕ್ಕಾಗಿ ಸಶಸ್ತ್ರ ಪಡೆಗಳ ಧ್ವಜ ದಿನ ನಿಧಿಯಿಂದ (ಎಎಫ್‌ಎಫ್‌ಡಿಎಫ್) ಹಣಕಾಸಿನ ನೆರವು ಒದಗಿಸಲಾಗಿದ್ದು, ಇದಕ್ಕಾಗಿ ಪ್ರತಿವರ್ಷ ಡಿಸೆಂಬರ್ 7 ರಂದು ಆಚರಿಸಲಾಗುವ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಲ್ಲಿ (ಎಎಫ್‌ಎಫ್‌ಡಿ) ಸಾರ್ವಜನಿಕರಿಂದ ಕೊಡುಗೆಗಳನ್ನು ಪಡೆಯಲಾಗುತ್ತದೆ.
2020ರ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಇಡೀ ಡಿಸೆಂಬರ್ ತಿಂಗಳು ಪೂರ್ತಿ ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ. ಸೈನಿ ಬೋರ್ಡ್ ಜೊತೆಗೆ ಕೇಂದ್ರ ಮತ್ತು ರಾಜ್ಯವು ಡಿಸೆಂಬರ್ ಪೂರ್ತಿ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಿದ್ದು, ಕರ್ತವ್ಯದ ವೇಳೆ ಗಾಯಗೊಂಡ ಸೈನಿಕರು ಅಥವಾ ಗಾಯಗೊಂಡ ನಮ್ಮ ಭದ್ರತಾ ಸಿಬ್ಬಂದಿಯ ಕುಟುಂಬಗಳನ್ನು ಬೆಂಬಲಿಸುವುದು ನಮ್ಮ ರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸಶಸ್ತ್ರ ಪಡೆಗಳ ಧ್ವಜ ದಿನದಂದು ಕಲಾ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಕೇಂದ್ರೀಯ ಸೈನಿಕ್ ಮಂಡಳಿ MyGov ವೇದಿಕೆ ಮೂಲಕ ನಾಗರಿಕರನ್ನು ಆಹ್ವಾನಿಸಲಿದೆ. ಈ ಸ್ಪರ್ಧೆಯ ಥೀಮ್ 'Tribute to the Armed Forces Veterans' ('ಸಶಸ್ತ್ರ ಪಡೆಗಳ ಶೂರರಿಗೆ ಗೌರವ') ಎಂಬುದಾಗಿದೆ.