ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ (ಆಮ್ ಆದ್ಮಿ ಪಕ್ಷ) ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ದೆಹಲಿ ಬಿಜೆಪಿ ಘಟಕ ಮಾಡಿರುವ ಮನವಿಯನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿರಸ್ಕರಿಸಿದ್ದಾರೆ.
ಈ ಬಗ್ಗೆ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರಿಗೆ ಪತ್ರ ಬರೆದಿರುವ ಅಣ್ಣಾ ಹಜಾರೆ, ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷವೊಂದು ಹೀಗೆ ಪ್ರತಿಭಟನೆಗೆ ನನ್ನನ್ನು ಆಹ್ವಾನಿಸಿರುವುದು ದುರದೃಷ್ಟಕರ ಎಂದಿದ್ದಾರೆ.
ನಿಮ್ಮ ಪತ್ರವನ್ನು ಓದಿದಾಗ ನನಗೆ ವಿಷಾದವೆನಿಸಿತು. ನಿಮ್ಮ ಪಕ್ಷ ಬಿಜೆಪಿ ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿದೆ. ಯುವಕರು ದೇಶದ ಆಸ್ತಿ ಮತ್ತು ನಿಮ್ಮ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ಯುವಕರ ಬೆಂಬಲವನ್ನು ಹೊಂದಿದೆ. ಆದಾಗ್ಯೂ 10-12 ಅಡಿ ಕೋಣೆಯಲ್ಲಿ ವಾಸಿಸುವ, ಯಾವುದೇ ಸಂಪತ್ತು, ಅಧಿಕಾರ ಹೊಂದಿರದ 83 ವರ್ಷದ ವೃದ್ಧನನ್ನು ಕರೆಯುತ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆಗೆ ಕೇಂದ್ರ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪಿಎಂ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ನಿಮ್ಮ ಸರ್ಕಾರ ಏಕೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹಜಾರೆ ಪತ್ರದಲ್ಲಿ ಪ್ರಶ್ನಿಸಿದ್ದಾರೆ.