ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಮತ್ತು ಬನಿಹಾಲ್ ಮೂಲಕ ಸಾಗಬೇಕಿದ್ದ ಭಾರತ್ ಜೋಡೋ ಯಾತ್ರೆಯ ಮಧ್ಯಾಹ್ನದ ಘಟ್ಟವನ್ನು ಪ್ರತಿಕೂಲ ಹವಾಮಾನದ ಕಾರಣ ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ತಿಳಿಸಿದ್ದಾರೆ. ಜನವರಿ 27 ರಂದು ಬೆಳಗ್ಗೆ 8 ಗಂಟೆಗೆ ಯಾತ್ರೆ ಪುನರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು. ಹವಾಮಾನ ಪರಿಸ್ಥಿತಿಗಳು ಮತ್ತು ಪ್ರದೇಶದಲ್ಲಿ ಭೂಕುಸಿತದಿಂದಾಗಿ ರಾಂಬನ್ ಮತ್ತು ಬನಿಹಾಲ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಮಧ್ಯಾಹ್ನದ ಹಂತವನ್ನು ರದ್ದುಗೊಳಿಸಲಾಗಿದೆ. ಯಾತ್ರೆ ಜನವರಿ 27 ರಂದು 8 ಗಂಟೆಗೆ ಪುನರಾರಂಭವಾಗಲಿದೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ನಿರಂತರ ಮಳೆಯ ನಡುವೆ ರಾಹುಲ್ ಗಾಂಧಿ ಬುಧವಾರ ಬೆಳಗ್ಗೆ ರಾಂಬನ್‌ನಿಂದ ಯಾತ್ರೆಯನ್ನು ಪುನರಾರಂಭಿಸಿದರು. ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದ ಯಾತ್ರೆ ಮುಂದೆ ಸಾಗದೆ ರದ್ದುಗೊಳಿಸಬೇಕಾಯಿತು. ನಾಳೆ ವಿಶ್ರಾಂತಿಯ ದಿನವಾಗಿರುವುದರಿಂದ ಶುಕ್ರವಾರ ಯಾತ್ರೆ ಪುನರಾರಂಭವಾಗಲಿದೆ. 270 ಕಿಮೀ ಉದ್ದದ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಂಬನ್‌ನಿಂದ ಬನಿಹಾಲ್‌ಗೆ ಸಂಪರ್ಕಿಸುವ ರಸ್ತೆಯು ಪ್ರಯಾಣಿಸಲು ಅತ್ಯಂತ ಪ್ರಯಾಸಕರವಾಗಿದೆ.
ಬುಧವಾರ ಬೆಳಗ್ಗೆ ಭಾರೀ ಮಳೆಯಿಂದಾಗಿ ರಾಂಬನ್ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಬೆಟ್ಟದಿಂದ ಕಲ್ಲುಬಂಡೆಗಳು ಕುಸಿದು ಬಿದ್ದಿದ್ದರಿಂದ ಟ್ರಕ್ ಚಾಲಕನೊಬ್ಬ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಇದರ ನಂತರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾರತ್ ಜೋಡೊ ಯಾತ್ರೆಯು ಶ್ರೀನಗರದಲ್ಲಿ ಮುಕ್ತಾಯಗೊಳ್ಳುವ ಮೊದಲು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ರಾಂಬನ್ ಮತ್ತು ಬನಿಹಾಲ್‌ನಲ್ಲಿ ಎರಡು ರಾತ್ರಿಗಳಂದು ವಾಸ್ತವ್ಯ ಹೂಡಲು ಈ ಹಿಂದೆ ನಿರ್ಧರಿಸಲಾಗಿತ್ತು.
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಜನವರಿ 19 ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪ್ರವೇಶಿಸಿದೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಪಾದಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ದಿನದ ಯಾತ್ರೆಯು ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ 7.45ರ ನಂತರವೇ ಆರಂಭವಾಗಿತ್ತು.
ಯಾತ್ರೆ ಕೊನೆಗೊಳ್ಳುವ ವೇಳೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರಾಡಳಿತ ಪ್ರದೇಶದಲ್ಲಿ 350 ಕಿಲೋಮೀಟರ್ ದೂರ ಕ್ರಮಿಸಲಿದ್ದಾರೆ. ವೇಳಾಪಟ್ಟಿಯ ಪ್ರಕಾರ, ಜನವರಿ 30 ರಂದು ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಹುಲ್ ಗಾಂಧಿ ಅವರ ಸಾರ್ವಜನಿಕ ರ್ಯಾಲಿಯೊಂದಿಗೆ ಶ್ರೀನಗರದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.
ಜನವರಿ 24 ರಂದು ಬೆಳಗ್ಗೆ ಜಮ್ಮುವಿನ ಗ್ಯಾರಿಸನ್ ಟೌನ್ ನಗ್ರೋಟಾದಿಂದ ಪುನರಾರಂಭಗೊಂಡ ಭಾರತ್ ಜೋಡೋ ಯಾತ್ರೆಯಲ್ಲಿ ಬಾಲಿವುಡ್ ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಹೆಜ್ಜೆ ಹಾಕಿದ್ದರು. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8 ಗಂಟೆ ಸುಮಾರಿಗೆ ಸೇನಾ ಗ್ಯಾರಿಸನ್ ಬಳಿಯಿಂದ ಮೆರವಣಿಗೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಮಾತೋಂಡ್ಕರ್ ಅವರು ರಾಹುಲ್ ಗಾಂಧಿ ಜೊತೆ ಯಾತ್ರೆಯಲ್ಲಿ ಸೇರಿಕೊಂಡರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರನ್ನು ಸ್ವಾಗತಿಸಲು ಮಾರ್ಗದುದ್ದಕ್ಕೂ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು.
ಇದನ್ನೂ ಓದಿ: ಭಾರತಕ್ಕೆ ಬಂದ ಗಣರಾಜ್ಯೋತ್ಸವದ ಅತಿಥಿ ಈಜಿಪ್ಟ್ ಅಧ್ಯಕ್ಷರಿಗೆ ಭವ್ಯ ಸ್ವಾಗತ