ಘಾಜಿಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಜಂಗಢ ಸಂಸದ ದಿನೇಶ್ ಲಾಲ್ ಯಾದವ್ ನಿರಾಹುವಾ ನಿವಾಸದ ಬಳಿ ಹೋಳಿ ಆಚರಣೆ ಮಾಡುತ್ತಿದ್ದಾಗ ಗಲಾಟೆ ಉಂಟಾಗಿ ದಲಿತ ಯವಕರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಘಟನೆಯನ್ನು ಖಂಡಿಸಿ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಘಾಜಿಪುರ ಜಿಲ್ಲೆಯ ತಾಂಡ್ವಾ ಗ್ರಾಮದಲ್ಲಿ ಸಂಸದ ದಿನೇಶ್ ಲಾಲ್ ಮನೆ ಇದೆ. ಬುಧವಾರ ಇಡೀ ಗ್ರಾಮದಲ್ಲಿ ಜನರು ಉತ್ಸಾಹದಿಂದ ಹೋಳಿ ಆಚರಿಸುತ್ತಿದ್ದರು. ಅಲ್ಲದೇ, ಸಂಸದರ ನಿವಾದ ಮುಂದೆ ಸ್ಥಳೀಯರು ನೆರೆದು ಹಬ್ಬದಾಟದಲ್ಲಿ ತೊಡಗಿದ್ದರು. ಇಲ್ಲಿಯೇ ಕೆಲ ದಲಿತ ಯುವಕರು ಕೂಡ ರಂಗೀನಾಟದಲ್ಲಿ ಭಾಗವಹಿಸಿದ್ದರು. ಈ ವೇಳೆ, ಸಂಸದರ ಸಹೋದರನೊಂದಿಗೆ ವಾಗ್ವಾದ ನಡೆಸಿದ್ದು, ಅದು ವಿಕೋಪಕ್ಕೆ ತಿರುಗಿ ಮಾರಾಮಾರಿಯಲ್ಲಿ ಅಂತ್ಯಗೊಂಡಿದೆ ಎಂದು ವರದಿಯಾಗಿದೆ.
ದಲಿತ ಯುವಕರ ಮೇಲೆ ಹಲ್ಲೆ ಖಂಡಿಸಿ ಸಂಸದ ದಿನೇಶ್ ಲಾಲ್ ಮನೆ ಮುಂದೆ ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರದಿಂದಲೇ ಪ್ರತಿಭಟನೆ ಕುಳಿತಿದ್ದಾರೆ. ಹೋಳಿ ಆಚರಣೆ ವೇಳೆ ದಿನೇಶ್ ಲಾಲ್ ಅವರ ಸಹೋದರ ಮತ್ತು ಸ್ನೇಹಿತರು ಸೇರಿಕೊಂಡು ನಿವಾಸದ ಹೊರಗೆ ದಲಿತ ಯುವಕರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನಂತರ ಈ ವಾಗ್ವಾದವು ವಿಕೋಪಕ್ಕೆ ತಿರುಗಿ ಸಂಸದ ದಿನೇಶ್ ಲಾಲ್ ಅವರ ಸಹೋದರ ಕೆಲ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮ ಹಲ್ಲೆಗೆ ಒಳಗಾದ ಯುವಕರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಈ ಯುವಕನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆತನ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಲ್ಲಿಂದ ವಿಶೇಷ ಚಿಕಿತ್ಸೆಗಾಗಿ ವಾರಣಾಸಿಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಭೀಮ್ ಆರ್ಮಿ ಸದಸ್ಯರು ತಿಳಿಸಿದ್ದಾರೆ.
ಆರು ಜನರ ವಿರುದ್ಧ ಕೇಸ್: ಮತ್ತೊಂದೆಡೆ, ಈ ಘಟನೆಯಲ್ಲಿ ಆರು ಮಂದಿ ವಿರುದ್ಧ ಶಾದಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಸದರ ಸಹೋದ ಹಾಗೂ ಇತರರ ವಿರುದ್ಧ ದಲಿತ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಣ್ಣ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯನ್ನು ಹೊಡೆದು ಕೊಂದೇ ಬಿಟ್ಟರು: ಪಾನಮತ್ತ ಯುವಕರ ದುಷ್ಕೃತ್ಯ
ಹೋಳಿಯಲ್ಲಿ ಡ್ಯಾನ್ಸ್ ಮಾಡುತ್ತಾ ಯುವಕ ಸಾವು: ಇದೇ ವೇಳೆ, ಗಾಜಿಯಾಬಾದ್ನಲ್ಲಿ ಭಾರಿ ದುರಂತ ನಡೆದಿದೆ. ಇಲ್ಲಿನ ಮೋದಿನಗರದ ಲಕ್ಷ್ಮಿ ನಗರ ಕಾಲೋನಿಯಲ್ಲಿ ಡಿಜೆ ಸದ್ದಿಗೆ ಡ್ಯಾನ್ಸ್ ಮಾಡುವಾಗ 30 ವರ್ಷದ ಯುವಕಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ವಿನೀತ್ ಕುಮಾರ್ ಎಂದು ಗುರುತಿಸಲಾಗಿದೆ. ವಿನೀತ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದರು ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಬುಧವಾರ ಕಾಲೋನಿಯಲ್ಲಿ ಹೋಳಿ ಆಚರಣೆ ವೇಳೆ ವಿನೀತ್ ಕುಮಾರ್ ಅವರು ಹತ್ತು ನಿಮಿಷಗಳ ಕಾಲ ನೃತ್ಯ ಮಾಡಿದ್ದರು. ತಲೆ ಮತ್ತು ಎದೆಯಲ್ಲಿ ನೋವು ಕಾಣಿಕೊಂಡು ನೆಲಕ್ಕೆ ಬಿದ್ದರು. ಆದರೆ, ಜೊತೆಗೆ ಕುಣಿಯುತ್ತಿದ್ದ ಇತರರಿಗೆ ಸ್ವಲ್ಪ ಸಮಯದವರೆಗೆ ವಿನೀತ್ಗೆ ಏನಾಗಿದೆ ಗೊತ್ತಿಲ್ಲ. ನಂತರದಲ್ಲಿ ಗಮನಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ: ಜಿ20 ಸಮ್ಮೇಳನದ ಸಭೆ: ವಾರಾಣಸಿಯಲ್ಲಿ ಬುಲ್ಡೋಜರ್‌ಗಳ ಮೂಲಕ 135 ಅಂಗಡಿಗಳ ನೆಲಸಮ