ಮುಜಾಫರ್ಪುರ( ಬಿಹಾರ): ಎಂತಹ ಜನ ಇರ್ತಿರಾ ಅಂತೀರಾ.. ಇಲ್ಲಿಬ್ಬರು ಅಧಿಕಾರಿಗಳು ಪಂಚಾಯಿತಿ ಕಟ್ಟಟವನ್ನೇ ಮಾರಾಟ ಮಾಡಿದ್ದಾರೆ. ಅಷ್ಟಕ್ಕೂ ಇಂತಹದ್ದೊಂದು ಮಾರಾಟ ನಡೆದಿರುವುದು ಬಿಹಾರದಲ್ಲಿ. ರಾಜ್ಯದ ಕಂದಾಯ ಸಚಿವ ರಾಮ್‌ಸುರತ್ ರಾಯ್ ಅವರ ವಿಧಾನಸಭಾ ಕ್ಷೇತ್ರದಲ್ಲಿ ಅನ್ನೋದು ಇನ್ನೂ ಬೆಚ್ಚಿ ಬೀಳಿಸುವ ಸಂಗತಿ. ಇಲ್ಲಿ ಪಂಚಾಯತ್ ಭವನವನ್ನು ನೆಲಸಮ ಮಾಡಿ ಮಾರಾಟ ಮಾಡಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ವಾಸ್ತವವಾಗಿ, ಬಿಹಾರದ ಮುಜಾಫರ್‌ಪುರದ ಔರೈ ಬ್ಲಾಕ್‌ನಲ್ಲಿರುವ ಔರೈ ಪಂಚಾಯತ್ ಭವನವನ್ನು ಯಾವುದೇ ಸರ್ಕಾರಿ ಆದೇಶವಿಲ್ಲದೆ ಮಾರಾಟ ಮಾಡಲಾಗಿದೆ. ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯ ಕುಮ್ಮಕ್ಕಿನಿಂದ ಮಾರಾಟ ನಡೆದಿದೆ ಎನ್ನಲಾಗಿದೆ. ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಅದರಲ್ಲಿದ್ದ ಇಟ್ಟಿಗೆಗಳನ್ನ ಮಾರಾಟ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಂಚಾಯತ್ ರಾಜ್ ಇಲಾಖೆ ಆರೋಪಿತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದೆ.
ಪ್ರಕರಣ ದಾಖಲಿಸಿದ ಇಲಾಖೆ: ಪಂಚಾಯತ್ ಅಧಿಕಾರಿಗಳ ಈ ಕಳ್ಳಾಟ ಇದೀಗ ಬೆಳಕಿಗೆ ಬಂದಿದ್ದು, ಈ ಇಬ್ಬರ ಮೇಲೂ ಕೇಸ್ ಜಡಿಯಲಾಗಿದೆ. ಸರ್ಕಾರಿ ಆಸ್ತಿ ನಾಶ, ಹಣಕಾಸು ಅವ್ಯವಹಾರ ಹಾಗೂ ಹಿರಿಯ ಅಧಿಕಾರಿಗಳಿಂದ ಮಾಹಿತಿ ಮುಚ್ಚಿಟ್ಟ ಆರೋಪ ಹೊರಿಸಲಾಗಿದೆ. ಮತ್ತೊಂದೆಡೆ, ಈ ಪ್ರಕರಣದಲ್ಲಿ ಬ್ಲಾಕ್ ಪಂಚಾಯಿತಿ ರಾಜ್ ಅಧಿಕಾರಿ ಗಿರಿಜೇಶ್ ನಂದನ್, ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯಿಂದ ಸ್ಪಷ್ಟನೆ ಕೇಳಿದ್ದಾರೆ.
ಕಟ್ಟಡ ಕಾಮಗಾರಿಯಲ್ಲಿ ನಡೆದಿತ್ತು ಅಕ್ರಮ: ಔರೈ ಪಂಚಾಯಿತಿ ಭವನವನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿದೆಯಂತೆ. ಆದರೆ, ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದರಿಂದ ಇಲ್ಲಿನ ನೌಕರ ಜೈಲು ಸೇರಿದ್ದ. 15 ವರ್ಷಗಳ ಬಳಿಕ ಅದೇ ಕಟ್ಟಡವನ್ನು ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿ ಜೆಸಿಬಿಯಿಂದ ಕೆಡವಿ ಕಟ್ಟಡದ ಅವಶೇಷಗಳನ್ನು ಮಾರಾಟ ಮಾಡಿದ್ದಾರೆ. ಪಂಚಾಯತ್ ಭವನ ಕೆಡವಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿತ್ತು.
ವಿವರಣೆ ಕೇಳಿದ ಹಿರಿಯ ಅಧಿಕಾರಿಗಳು: ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಂಚಾಯಿತಿ ಕಟ್ಟಡ ಕೆಡವಿದ ಬಗ್ಗೆ ಕೇತ್ರ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಕಾರ್ಯದರ್ಶಿ ಅವರಿಂದ ವಿವರಣೆ ಕೇಳಿದ್ದರು. ಸರ್ಕಾರಿ ಕಟ್ಟಡವನ್ನು ಕೆಡವಿ ಹರಾಜು ಮಾಡದೇ ಮಾರಾಟ ಮಾಡಿದ್ದು ಹೇಗೆ ಎಂದು ಕೇಳಲಾಗಿತ್ತು.
ಈ ಕುರಿತು ಏಪ್ರಿಲ್ 29ರಂದು ಬ್ಲಾಕ್ ಪಂಚಾಯಿತಿ ರಾಜ್ ಅಧಿಕಾರಿ ಪತ್ರ ಬರೆದು, ಎರಡು ದಿನಗಳಲ್ಲಿ ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯಿಂದ ಸ್ಪಷ್ಟನೆ ನೀಡುವಂತೆ ಕೋರಿದ್ದರು. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಪ್ರಕರಣದ ತನಿಖೆಯ ನಂತರ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್ ಆಫೀಸರ್ ಹೇಳಿದ್ದಾರೆ.
ಔರೈ ಪಂಚಾಯತ್ ಭವನ ಶಿಥಿಲಾವಸ್ಥೆಯಲ್ಲಿತ್ತು. ಕುಳಿತುಕೊಳ್ಳಲು ಜಾಗವಿರಲಿಲ್ಲ. ಹಾಗಾಗಿ ಬಿಡಿಒ ಸೇರಿದಂತೆ ಇತರ ಪದಾಧಿಕಾರಿಗಳ ಒಪ್ಪಿಗೆ ಪಡೆದು ಕಟ್ಟಡ ಕೆಡವಲಾಗಿದೆ. ಅದೇ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಮುಖ್ಯಾಧಿಕಾರಿ, ಉಮಾಶಂಕರ್ ಗುಪ್ತಾ ಹೇಳಿದ್ದಾರೆ.
ಈ ಹಿಂದೆಯೂ ಕಳ್ಳತನದ ಘಟನೆಗಳ ವಿವರ: ಈ ಮೊದಲು ಪೂರ್ಣಿಯಾದಲ್ಲಿ ಇಂಜಿನ್ ಮಾರಾಟ ಪ್ರಕರಣ ಬೆಳಕಿಗೆ ಬಂದಿತ್ತು. ಇದಾದ ಕೆಲವೇ ದಿನಗಳಲ್ಲಿ ರೋಹ್ತಾಸ್‌ನಿಂದ ಸೇತುವೆಯನ್ನು ಮಾರಾಟ ಮಾಡುವ ಮಾತು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯ ಕುಮ್ಮಕ್ಕಿನಿಂದ ಪಂಚಾಯತ್ ಭವನವನ್ನು ಮಾರಾಟ ಮಾಡಿರುವ ಆಸ್ತಿ ಬೆಳಕಿಗೆ ಬಂದಿದೆ.
ಇದನ್ನು ಓದಿ:ಈ ಸೆಕ್ಷನ್ ಹಾಕುವುದು ಬೇಡ ಎಂದು ರಾಜ್ಯಗಳಿಗೆ ಏಕೆ ಹೇಳಬಾರದು?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ