ಪಾರಾದೀಪ್(ಒಡಿಶಾ): ದೇಶದಲ್ಲಿ ಸಾಮೂಹಿಕ ಅತ್ಯಾಚಾರದಂತಹ ಹೇಯ ಕೃತ್ಯಗಳು ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಸದ್ಯ ಅಂತಹದೊಂದು ಪ್ರಕರಣ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಆರೋಗ್ಯ ಕಾರ್ಯಕರ್ತೆ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಪಾರಾದೀಪ್ನ ನೆಹರು ಬಂಗಲೆ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತೆ ಇಂದು ಪಾರಾದೀಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರಿನ ಪ್ರಕಾರ, 'ಸೈಕಲ್ ಮೇಲೆ ತೆರಳುತ್ತಿದ್ದ ವೇಳೆ ನಾಲ್ವರು ತನ್ನನ್ನು ಅಪಹರಣ ಮಾಡಿದ್ದು, ಕಾರಿನಲ್ಲಿ ಕರೆದುಕೊಂಡು ಹೋಗಿ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ' ಎಂದು ಸಂತ್ರಸ್ತೆ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ವಿಧಿವಿಜ್ಞಾನ ತಂಡ ಹಾಗೂ ಶ್ವಾನದೊಂದಿಗೆ ಭೇಟಿ ನೀಡಿದ್ದು, ಸ್ಥಳದ ಪರಿಶೀಲನೆ ನಡೆಸಲಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ಸಂತ್ರಸ್ತೆ, ಕಾರಿನಲ್ಲಿ ಬಂದಿರುವ ನಾಲ್ವರು ನನ್ನನ್ನು ಬಲವಂತವಾಗಿ ಕಾರಿನೊಳಗೆ ಹಾಕಿಕೊಂಡಿದ್ದು, ನೆಹರು ಬಂಗಲೆಯ ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ದುಷ್ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾರೆ. ಅತ್ಯಾಚಾರಕ್ಕೂ ಮುನ್ನ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಆಶಾ ಕಾರ್ಯಕರ್ತೆ ವಿವರಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದ ಕಾಮುಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ನಿರ್ಭಯಾ ಮಾದರಿ ಕೇಸ್: ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ರೇಪ್, ಬೆತ್ತಲೆಗೊಳಿಸಿ ಥಳಿತ
ಮತ್ತೊಂದು ಪ್ರಕರಣದಲ್ಲಿ ಪಂಜಾಬ್ನ ಸಂಗ್ರೂರ್ನಲ್ಲಿ 55 ವರ್ಷದ ಕಾಮುಕನೋರ್ವ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಹೇಯ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, 10 ವರ್ಷದ ಬಾಲಕಿ ಮೇಲೆ ದುಷ್ಕೃತ್ಯ ನಡೆದಿದೆ. ಅಪ್ರಾಪ್ತೆ ವಾಸವಾಗಿದ್ದ ಮನೆಯ ಪಕ್ಕದಲ್ಲಿನ ಕೆರೆಯಲ್ಲಿ ಬಾತುಕೋಳಿ ವೀಕ್ಷಣೆ ಮಾಡಲು ತೆರಳಿದ್ದ ವೇಳೆ ಆಕೆಯನ್ನು ಅಪಹರಣ ಮಾಡಿ, ಕೈಕಾಲು ಕಟ್ಟಿ ಅತ್ಯಾಚಾರವೆಸಗಿದ್ದಾನೆ.
ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಜನರು ಬಾಲಕಿಯ ಕಿರುಚಾಟದ ಧ್ವನಿ ಕೇಳಿ ಆಕೆಯನ್ನ ರಕ್ಷಣೆ ಮಾಡಿದ್ದಾರೆ. ಘಟನೆ ಬೆನ್ನಲ್ಲೇ ಕಾಮುಕ ಸ್ಥಳದಿಂದ ಪರಾರಿಯಾಗಿದ್ದಾಗಿ ತಿಳಿದುಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.