ಚಂಡೀಗಢ: ಪಂಜಾಬ್ ಸ್ಟೇಸ್ ಡಿಯರ್ 100 ಮಾಸಿಕ ಲಾಟರಿ ಬೆಳಗಾಗುವುದರೊಳಗೆ ಒಂದು ಬಡ ಕುಟುಂಬವನ್ನು ಕೋಟ್ಯಾಧೀಶರನ್ನಾಗಿ ಮಾಡಿದೆ.
ಹೌದು, ಬಾಗಾಪುರಾಣದ ನಿವಾಸಿ 61 ವರ್ಷದ ಆಶಾ ರಾಣಿ ಒಂದು ಕೋಟಿ ರೂಪಾಯಿಗಳನ್ನು ಲಾಟರಿ ಮೂಲಕ ಗೆದ್ದಿದ್ದಾರೆ. ಈ ತಿಂಗಳ ಲಾಟರಿ ವಿಜೇತರಲ್ಲಿ ಆಶಾ ಗೆದ್ದಿದ್ದು, ಈ ಸಂಬಂಧ ಹಣ ಪಡೆದುಕೊಳ್ಳಲು ಲಾಟರಿ ಟಿಕೆಟ್ ಮತ್ತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಿದ್ದಾರೆ.
ಬಹುಮಾನವನ್ನು ಗೆದ್ದ ನಂತರ ಪ್ರತಿಕ್ರಿಯೆ ನೀಡಿರುವ ಅವರು, ತಾನು ಒಂದು ದಿನ ಕೋಟ್ಯಾಧಿಪತಿ ಆಗುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ ಎಂದಿದ್ದಾರೆ. ಇವರ ಪತಿ ಬಾಗಾಪುರಾಣದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಇವರೂ ಕೂಡ ಇದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆಶಾ ರಾಣಿಗೆ 61 ವರ್ಷ ವಯಸ್ಸಾಗಿದ್ದು, ಈ ಬಗ್ಗೆ ಸಂತಸ ವ್ಯಕ್ತಪಡಿಸಿ, ಈ ಲಾಟರಿಯಿಂದ ಬಂದ ಹಣದ ಮೂಲಕ ಹೊಸ ಮನೆ ಕಟ್ಟುತ್ತೇವೆ. ಈಗಿರುವ ಮನೆ ತುಂಬಾ ಚಿಕ್ಕದಾಗಿರುವುದರಿಂದ ಹೊಸ ಮನೆ ನಿರ್ಮಾಣ ಮಾಡಬೇಕಿದೆ. ಉಳಿದ ಮೊತ್ತವನ್ನು ಕುಟುಂಬ ವ್ಯವಹಾರಕ್ಕೆ ಬಳಸಿಕೊಳ್ಳುತ್ತೇವೆ ಎಂದು ಸಂತಸ ಹಂಚಿಕೊಂಡಿದ್ದಾರೆ.