ಇಟಾನಗರ: ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್‌ನಲ್ಲಿ ಶುಕ್ರವಾರ ಬೆಳಗ್ಗೆ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಂದಿನಂತೆ ನಿಯಮಿತವಾಗಿ ಹಾರಾಟ ನಡೆಸುತ್ತಿದ್ದ ಸೇನಾ ಸಿಬ್ಬಂದಿಯನ್ನು ಹೊತ್ತ ಸುಧಾರಿತ ಲಘು ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಅವರು ಹೇಳಿದರು. ಬೆಳಗ್ಗೆ 10.43ಕ್ಕೆ ಈ ಘಟನೆ ನಡೆದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹೆಲಿಕಾಪ್ಟರ್ ಅಫಘಾತಕ್ಕೀಡಾದ ಸ್ಥಳದಲ್ಲಿ ಎರಡು ಮೃತದೇಹಗಳು ಸಿಕ್ಕಿವೆ ಎಂದು ಇದೀಗ ಬಂದ ವರದಿಗಳು ತಿಳಿಸಿವೆ.
ಅಪಘಾತದ ಸ್ಥಳವು ಯಾವುದೇ ರಸ್ತೆ ಸಂಪರ್ಕ ಹೊಂದಿಲ್ಲ, ಆದರೆ ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಪ್ಪರ್ ಸಿಯಾಂಗ್ ಹಿರಿಯ ಪೊಲೀಸ್ ಜುಮ್ಮರ್ ಬಸಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗ್ರಾಮಕ್ಕೆ ತೆರಳಲು ಮೋಟರ್ ಮೂಲಕ ತೆರಳಬಹುದಾದ ಯಾವದೇ ರಸ್ತೆಗಳಿಲ್ಲ. ನೇತಾಡುವ ಸೇತುವೆಯ ಮೂಲಕ ಸ್ಥಳಕ್ಕೆ ತೆರಳಿರುವ ಸೇನೆ ಮತ್ತು ವಾಯುಪಡೆ ಜಂಟಿ ತಂಡಗಳು ಒಂದು ಎಂಐ -17 ಮತ್ತು ಎರಡು ಧ್ರುವ್ ಹೆಲಿಕಾಪ್ಟರ್‌ಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಸ್ಥಳೀಯ ಗ್ರಾಮಸ್ಥರೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಣಿವೆ ರಾಜ್ಯದಲ್ಲಿದೆ ಅತೀ ದೊಡ್ಡ ರೈನ್ಬೋ ಫಿಶ್ ಸಾಕಣೆ ಕೇಂದ್ರ.. ಮೀನಿನ ಮೊಟ್ಟೆಗೆ ವಿದೇಶದಲ್ಲೂ ಬೇಡಿಕೆ