ರಾಯ್ಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಸುಕ್ಮಾ-ಬಿಜಾಪುರ ಪ್ರದೇಶದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ ಸುಮಾರು 22 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ನಕ್ಸಲರ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ. ನಕ್ಸಲ್ ಪೀಡಿತ ಪ್ರದೇಶಗಳನ್ನು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ನಿಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಹೇಳಿದರು.
ಭಾನುವಾರ ವಿಧಾನಸಭಾ ಚುನಾವಣೆ ಪ್ರಚಾರ ನಡೆಸಿ ಅಸ್ಸಾಂನಿಂದ ರಾಯ್‌ಪುರಕ್ಕೆ ಮರಳಿದಾಗ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಗುಂಡಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ
ಆ ಬಳಿಕ ಮಾತನಾಡಿದ ಅವರು, "ನಮ್ಮ ಜವಾನರು ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಅವರು ಧೈರ್ಯದಿಂದ ಹೋರಾಡಿದ್ದಾರೆ. ಅವರ ತ್ಯಾಗಕ್ಕೆ ನಾನು ತಲೆಬಾಗುತ್ತೇನೆ. ಭದ್ರತಾ ಪಡೆಗಳು ಹೆಚ್ಚು ಪ್ರೇರಣೆ ಪಡೆದಿವೆ. ನಕ್ಸಲರ ವಿರುದ್ಧದ ಯುದ್ಧವನ್ನು ಗೆಲ್ಲಲು ದೃಢನಿರ್ಧಾರ ಕೈಗೊಂಡಿದೆ. ಈ ನಕ್ಸಲ್-ಪೊಲೀಸ್ ಕಾಳಗದಲ್ಲಿ ಬಿಜಾಪುರದ ನಕ್ಸಲರಿಗೆ ಭಾರಿ ಹಾನಿಯನ್ನುಂಟು ಮಾಡಿದೆ. ನಕ್ಸಲರು ತಮ್ಮ ಮೃತ ಮತ್ತು ಗಾಯಗೊಂಡ ಸಹಚರರನ್ನು ನಾಲ್ಕು ಟ್ರಾಕ್ಟರುಗಳಲ್ಲಿ ಎನ್ಕೌಂಟರ್ ಸ್ಥಳದಿಂದ ಕರೆದೊಯ್ದಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ನಕ್ಸಲ್ ದಾಳಿ.. ಎನ್ಕೌಂಟರ್ ವೇಳೆ ಭದ್ರತಾ ಪಡೆಯ ಶಸ್ತ್ರಾಸ್ತ್ರಗಳ ಲೂಟಿ.. ಹುತಾತ್ಮರಿಗೆ ಗಣ್ಯರ ನಮನ
"ಈ ಚಕಮಕಿ ನಾಲ್ಕು ಗಂಟೆಗಳ ಕಾಲ ಮುಂದುವರಿದಿದೆ. ಭದ್ರತಾ ಪಡೆಗಳು ನಕ್ಸಲ್ ಪೀಡಿತ ಪ್ರದೇಶಗಳನ್ನು ಪ್ರವೇಶಿಸಿ ಶೌರ್ಯದಿಂದ ಹೋರಾಡಿದ್ದಾರೆ. ನಕ್ಸಲರ ಪ್ರಭಾವ ಶೀಘ್ರವಾಗಿ ಕುಗ್ಗುತ್ತಿದೆ" ಎಂದು ಅವರು ಹೇಳಿದರು.
"ನಕ್ಸಲ್ ಭದ್ರಕೋಟೆ ಇರುವ ಪ್ರದೇಶದಲ್ಲಿ ಶಿಬಿರಗಳನ್ನು ಸ್ಥಾಪಿಸಲು ಸುಮಾರು 2000 ಸೈನಿಕರನ್ನು ಕಳುಹಿಸಲಾಗಿದೆ. ಇದು ಅವರ ಚಲನೆಯನ್ನು ನಿರ್ಬಂಧಿಸುತ್ತದೆ. ಯಾವುದೇ ಗುಪ್ತಚರ ವೈಫಲ್ಯವಿಲ್ಲ. ನಾವು ಖಂಡಿತವಾಗಿಯೂ ಅಲ್ಲಿ ಶಿಬಿರಗಳನ್ನು ಸ್ಥಾಪಿಸುತ್ತೇವೆ. ಮೃತ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ" ಎಂದರು.