ಅಮರಾವತಿ (ಆಂಧ್ರಪ್ರದೇಶ): ಮುಖ್ಯಮಂತ್ರಿ ಬೆಂಗಾವಲು ಪಡೆಗಾಗಿ ಕಾರು ಬೇಕಾಗಿದೆ ಎಂದು ಹೇಳಿ ತಿರುಪತಿಗೆ ಹೋಗುತ್ತಿದ್ದ ಪ್ರಯಾಣಿಕರ ಕಾರನ್ನು ಪೊಲೀಸರು ಬಲವಂತದಿಂದ ತೆಗೆದುಕೊಂಡಿದ್ದಾರೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಸಮೇತವಾಗಿ ಇಡೀ ಕುಟುಂಬ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆಯುವಂತೆ ಆಗಿದೆ. ಈ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಓಂಗೋಲ್ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ.
ಶುಕ್ರವಾರ ಒಂಗೋಲ್‌ಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಬೆಂಗಾವಲು ಪಡೆಗೆ ವಾಹನದ ಅಗತ್ಯವಿದೆ ಎಂದು ಹೇಳಿ ಕಾನ್‌ಸ್ಟೇಬಲ್ ಈ ಯಾತ್ರಿಕರ ಕಾರನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇತ್ತ, ಸಿಎಂ ಜಗನ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.
ರಾತ್ರಿ ಆಗಿದ್ದೇನು?: ಪಲ್ನಾಡು ಜಿಲ್ಲೆಯ ವಿನುಕೊಂಡದ ವೇಮುಲ ಶ್ರೀನಿವಾಸ್ ಮತ್ತು ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಇನ್ನೋವಾ ಕಾರಿನಲ್ಲಿ ತಿರುಪತಿಗೆ ಹೊರಟಿದ್ದರು. ಬುಧವಾರ ರಾತ್ರಿ ಒಂಗೋಲ್‌ನ ಸಮೀಪದ ಹೋಟೆಲ್‌ನಲ್ಲಿ ಊಟಕ್ಕೆಂದು ಇವರ ಕುಟುಂಬ ನಿಂತಿತ್ತು. ಆದರೆ, ಆಗ ಸ್ಥಳಕ್ಕೆ ಬಂದ ಕಾನ್‌ಸ್ಟೇಬಲ್ ಒಬ್ಬ ಸಿಎಂ ಬರುತ್ತಿದ್ದಾರೆ, ಕಾರು ಬೇಕೆಂದು ಹೇಳಿದ್ದಾನೆ. ಆಗ ನಾವು ತಿರುಪತಿಗೆ ತೀರ್ಥಯಾತ್ರೆಗೆಂದು ಬಂದಿದ್ದೇವೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಆದರೂ, ಕಾನ್‌ಸ್ಟೇಬಲ್ ಕ್ಷಮಿಸಿ ಎಂದು ಹೇಳುತ್ತ, ಇಡೀ ಕುಟುಂಬವನ್ನು ರಸ್ತೆಯಲ್ಲೇ ನಿಲ್ಲಿಸಿ ಚಾಲಕನ ಸಮೇತವಾಗಿ ಇನ್ನೋವಾ ತೆಗೆದುಕೊಂಡು ಹೋಗಿದ್ದಾರಂತೆ.
ಸರ್ಕಾರದ ವಿರುದ್ಧ ನಾಯ್ಡು ವಾಗ್ದಾಳಿ: ಒಂದು ಕುಟುಂಬದ ಕಾರನ್ನು ಸಿಎಂ ಹೆಸರಲ್ಲಿ ತೆಗೆದುಕೊಂಡು ಹೋಗಿರುವ ಈ ಘಟನೆಯನ್ನು ಟಿಡಿಪಿ ಅಧ್ಯಕ್ಷ, ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ದುಷ್ಕೃತ್ಯ ಎಂದು ಕರೆದಿರುವ ನಾಯ್ಡು, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅರಾಜಕತೆ ನಡೆಯುತ್ತಿದೆ. ಇವರ ಆಡಳಿತ ರಾಜ್ಯದ ಜನರನ್ನು ಹೇಗೆ ಬಾಧಿಸುತ್ತಿದೆ ಎಂಬುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಅಧಿಕಾರಿಗಳಿಗೆ ಇಂತಹ ಹಕ್ಕು ನೀಡಿದ್ದು ಯಾರು?. ಸಿಎಂ ಬೆಂಗಾವಲು ಪಡೆಗೆ ತನ್ನ ಸ್ವಂತ ಕಾರಿನ ವ್ಯವಸ್ಥೆ ಮಾಡಲು ಸಾಧ್ಯವಾಗದಂತಹ ದಯನೀಯ ಸ್ಥಿತಿಗೆ ರಾಜ್ಯದ ಆರ್ಥಿಕತೆ ತಲುಪಿದೆಯೇ ಎಂದು ಜಗನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿಟ್ಟು, ಇಬ್ಬರ ಅಮಾನತು: ಈ ಘಟನೆಯ ಬಗ್ಗೆ ಸ್ವತಃ ಸಿಎಂ ಜಗತ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ಸಾಮಾನ್ಯರಿಗೆ ತೊಂದರೆ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಕ್ಷಣವೇ ಆ ಕುಟುಂಬ ಕಾರು ಮರಳಿ ತಲುಪಿಸುವಂತೆ ಸೂಚಿಸಿದ್ದು, ಮುಂದೆ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿಟ್ಟಾದ ಬೆನ್ನಲ್ಲೇ ಹೋಂಗಾರ್ಡ್ ತಿರುಪತಿ ರೆಡ್ಡಿ ಹಾಗೂ ಸಹಾಯಕ ವಾಹನ ಇನ್ಸ್ಪೆಕ್ಟರ್ ಸಂಧ್ಯಾ ಎಂಬುವವರಿಗೆ ಅಮಾನತು ಶಿಕ್ಷೆ ನೀಡಲಾಗಿದೆ.