ಸಂಗಾರೆಡ್ಡಿ(ತೆಲಂಗಾಣ): ಆ ಬಾಲಕ ಕೇವಲ ಮೂರೇ ವರ್ಷದಲ್ಲಿ ತಾಯಿಯನ್ನು ಕಳೆದುಕೊಂಡಿದ್ದನು. ತಾಯಿ ಮೃತಪಡುವ ಮೊದಲೇ ತಂದೆಯೂ ಬೇರೆಯಾಗಿದ್ದನು. ತಾಯಿಯ ಮೃತದೇಹದ ಮುಂದೆ ಯಾರೂ ಇಲ್ಲದೇ ಅತ್ತಿದ್ದನು. ಕೊರೊನಾ ಮತ್ತು ಲಾಕ್ಡೌನ್ ವೇಳೆ ಆತನ ಆರೈಕೆಗೆ ಯಾರೂ ಇರಲಿಲ್ಲ. ಈ ವೇಳೆ ಸಂಗಾರೆಡ್ಡಿ ಜಿಲ್ಲೆಯ ಅಧಿಕಾರಿಗಳು ಮಗುವಿನ ಜವಾಬ್ದಾರಿ ವಹಿಸಿಕೊಂಡರು.
ಈಗ ಎರಡು ವರ್ಷಗಳು ಕಳೆದಿವೆ. ಆ ಬಾಲಕನಿಗೆ ದೀರ್ಘಕಾಲದ ಅನಾರೋಗ್ಯವೂ ಕಾಡುತ್ತಿದೆ ಎಂದು ಅಧಿಕಾರಿಗಳಿಗೆ ಇತ್ತೀಚೆಗೆ ಗೊತ್ತಾಗಿದೆ. ಆಗಿನಿಂದ ಅವರು ಬಾಲಕನನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಾರೆ. ಈಗ ಆ ಬಾಲಕನಿಗೆ ಅದೃಷ್ಟ ಒಲಿದಿದೆ, ಅಮೆರಿಕದ ದಂಪತಿ ಆ ಬಾಲಕನನ್ನು ದತ್ತು ಪಡೆದುಕೊಂಡಿದ್ದಾರೆ.
ಅಮೆರಿಕದ ಖ್ಯಾತ ವೈದ್ಯ ಸ್ಟೀಫನ್ ಪ್ಯಾಟ್ರಿಕ್ ಬರ್ಗಿನ್ ದಂಪತಿ ಇಂತಹ ಮಕ್ಕಳನ್ನ ದತ್ತು ತೆಗೆದುಕೊಳ್ಳುತ್ತಿದ್ದು, ಸಂಬಂಧಿತ ಏಜೆನ್ಸಿಗಳಿಂದ ವಿವರಗಳನ್ನು ಸಂಗ್ರಹಿಸಿದ ನಂತರ ಅವರು ಈ ಬಾಲಕನನ್ನು ಆಯ್ಕೆ ಮಾಡಿದ್ದಾರೆ. ಬಾಲಕನನ್ನು ದತ್ತು ತೆಗೆದುಕೊಳ್ಳಲು ಬೇಕಾದ ಎಲ್ಲಾ ಷರತ್ತುಗಳನ್ನು ಅವರು ಪೂರ್ಣಗೊಳಿಸಿದ್ದಾರೆ. ಆ ನಂತರ ಬರ್ಗಿನ್ ಮತ್ತು ಅವರ ಪತ್ನಿ ಎರಿನ್ ಲಿನ್ ವಿಡಿಯೋ ಕರೆಗಳ ಮೂಲಕ ಬಾಲಕನೊಂದಿಗೆ ಮಾತನಾಡಿದ್ದು, ಬಾಂಧವ್ಯ ಬೆಳೆಸಿದ್ದಾರೆ. ಬಾಲಕನಿಗಾಗಿ ಔಷಧಗಳು ಮತ್ತು ಆಟಿಕೆಗಳನ್ನು ಕಳುಹಿಸಿದ್ದಾರೆ. ಗುರುವಾರವಷ್ಟೇ ಅವರು ಅಮೆರಿಕದಿಂದ ಸಂಗಾರೆಡ್ಡಿಗೆ ಬಂದಿದ್ದು, ಬಾಲಕನನ್ನು ಕರೆದುಕೊಂಡು ಅಮೆರಿಕಕ್ಕೆ ತೆರಳಲಿದ್ದಾರೆ.
ಅಮೆರಿಕದ ದಂಪತಿ ದತ್ತು ಸ್ವೀಕಾರ ಪತ್ರ ತೆಗೆದುಕೊಂಡಿದ್ದಾರೆ. ಅವರು ಆ ಹುಡುಗನನ್ನು ತಮ್ಮೊಂದಿಗೆ ಅಮೆರಿಕಕ್ಕೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇಬ್ಬರು ಮಕ್ಕಳಿದ್ದರೂ ದಂಪತಿ ಈ ಹುಡುಗನನ್ನು ದತ್ತು ತೆಗೆದುಕೊಂಡಿರುವುದೇ ದೊಡ್ಡ ಸಂಗತಿಯಾಗಿದೆ.
ಇದನ್ನೂ ಓದಿ: ಸ್ವಾಭಿಮಾನದಿಂದ ಬದುಕುತ್ತಿದ್ದ ಭಿಕ್ಷುಕನನ್ನು ಕೊಂದ ಮೂವರು.. ಐದು ತಿಂಗಳ ಬಳಿಕ ಸೆರೆ ಹಿಡಿದ ಪೊಲೀಸರು!