ನವದೆಹಲಿ: ವಯಸ್ಕರ ಬಳಿಕ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿವೃದ್ದಿಪಡಿಸಲಾಗಿದ್ದು, ಅದರ ವೈದ್ಯಕೀಯ ಪ್ರಯೋಗಕ್ಕೆ (Clinical trials) ಸಿದ್ದತೆ ಮಾಡಿಕೊಳ್ಳಲಾಗಿದೆ. ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಲ್ಲಿ 6 ರಿಂದ 12 ವರ್ಷದೊಳಗಿನ ಮಕ್ಕಳಿಗಾಗಿ ಭಾರತ್ ಭಯೋಟೆಕ್ ಅಭಿವೃದ್ದಿಪಡಿಸಿದ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಸ್ವಯಂ ಸೇವಕರನ್ನು ದಾಖಲಾತಿ ಮಾಡಿಕೊಳ್ಳಲಾಗ್ತಿದೆ.
6 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಇಂದಿನಿಂದ ಸ್ವಯಂ ಸೇವಕರನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಇದಾದ ಬಳಿಕ 2 ರಿಂದ 6 ವರ್ಷದೊಳಗಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ. 12 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕೆಯ ಕ್ಲಿನಿಕಲ್ ಪ್ರಯೋಗ ಈಗಾಗಲೇ ಆರಂಭಗೊಂಡಿದ್ದು, ಸ್ವಯಂ ಸೇವಕರಿಗೆ ಮೊದಲ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.
ಕೋವಿಡ್ ಎರಡನೇ ಅಲೆ ದೇಶದಲ್ಲಿ ಕೊಂಚ ಶಾಂತವಾಗಿದೆ. ಮುಂದೆ ಮೂರನೇ ಅಲೆ ವಕ್ಕರಿಸುವ ಮನ್ಸೂಚನೆಯಿದ್ದು, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹಾಗಾಗಿ, ಮಕ್ಕಳ ಲಸಿಕೆ ಅಭಿವೃದ್ದಿ ಕಾರ್ಯ ತ್ವರಿತಗೊಳಿಸಲಾಗಿದೆ.
ಯುಎಸ್ನಲ್ಲಿ ಮಕ್ಕಳಿಗೆ ಲಸಿಕೆ:
ಅಮೆರಿಕದಲ್ಲಿ ಈಗಾಗಲೇ 12 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಫೈಝರ್ ಬಯೋಟೆಕ್ ಅಭಿವೃದ್ದಿಪಡಿಸಿದ ಕೋವಿಡ್ ಲಸಿಕೆ ನೀಡಲು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ (ಸಿಡಿಸಿ) ಅನುಮತಿ ನೀಡಿದೆ. ಸದ್ಯಕ್ಕೆ ಫೈಝರ್ ಲಸಿಕೆಗೆ ಮಾತ್ರ ಅನುಮತಿ ನೀಡಿದ್ದು, ಮಾಡೆರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ (ಜೆ&ಜೆ) ಲಸಿಕೆ ಪಡೆಯದಂತೆ ಸೂಚಿಸಿದೆ.
ಇದನ್ನೂ ಓದಿ: ಆಂಧ್ರದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು 2,303ಕ್ಕೆ ಏರಿಕೆ: 157 ಮಂದಿ ಸಾವು