ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯುವ ಜಿ-20 ವಾರ್ಷಿಕ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರಾಗುತ್ತಿದ್ದಾರೆ. ಈ ಗ್ರೂಪ್ ಆಫ್ 20 (ಜಿ-20) ಅಂತರ ಸರ್ಕಾರಿ ವೇದಿಕೆಯಾಗಿದ್ದರೂ, ಅಂತಾರಾಷ್ಟ್ರೀಯ ಆರ್ಥಿಕ ಸ್ಥಿರತೆ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಹಾಗೈ ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಈಗ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿಯು ಭೌಗೋಳಿಕ ರಾಜಕೀಯ ಪರಿಣಾಮಗಳಿಗೆ ಕಾರಣವಾಗಬಹುದು.
ಜಿ-20 ಶೃಂಗಸಭೆಯಿಂದ ಎರಡೂ ರಾಷ್ಟ್ರಗಳ ನಾಯಕರು ದೂರ ಉಳಿದಿರುವ ನಿರ್ಧಾರವು ಇಂಡೋ-ಪೆಸಿಫಿಕ್‌ನಲ್ಲಿನ ವಿಕಸನ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷ, ಜಾಗತಿಕ ಶಕ್ತಿಯ ಸಮತೋಲನದಲ್ಲಿ ಗಮನಾರ್ಹ ಬದಲಾವಣೆಗಳ ಕುರಿತು ಪರಿಣಾಮಗಳನ್ನು ಸೂಚಿಸುತ್ತದೆ. ವರ್ಷಗಳ ಕಾಲ ಜಿ-20 ಪ್ರಪಂಚದ ಪ್ರಮುಖ ಆರ್ಥಿಕತೆಗಳ ನಡುವೆ ಸಂಭಾಷಣೆ ಮತ್ತು ಸಹಕಾರಕ್ಕಾಗಿ ವೇದಿಕೆಯಾಗಿತ್ತು. ಆದಾಗ್ಯೂ, ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಪ್ರಾಬಲ್ಯದ ಏರಿಕೆ ಮತ್ತು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವು ಈ ಅಂತಾರಾಷ್ಟ್ರೀಯ ಬಂಧಗಳನ್ನು ಮುರಿಯುವ ಹಂತಕ್ಕೆ ತಲುಪಿದೆ.
ಪುಟಿನ್ ಗೈರು: ಮೊದಲಿಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಅನುಪಸ್ಥಿತಿ ಕುರಿತು ತಿಳಿಯುವುದಾದರೆ, ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಪುಟಿನ್ ಅವರು ಜಿ-20 ಶೃಂಗಸಭೆಯಲ್ಲಿ ಅನುಪಸ್ಥಿತಿ ಬಗ್ಗೆ ತಿಳಿಸಿದ್ದರು. ರಷ್ಯಾವನ್ನು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದರು. ಇಬ್ಬರು ನಾಯಕರ ನಡುವಿನ ದೂರವಾಣಿ ಸಂಭಾಷಣೆಗೂ ಮುನ್ನ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಈಗ ಅಧ್ಯಕ್ಷರು ನಿಜವಾಗಿಯೂ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿರುವುದರಿಂದ ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸಹಜವಾಗಿ ಅಧ್ಯಕ್ಷರ ಮುಖ್ಯ ಗಮನ ಇನ್ನೂ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಇದೆ. ಆದ್ದರಿಂದ ಅವರು ಪ್ರವಾಸವು ಕಾರ್ಯಸೂಚಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮನೋಹರ್ ಪರಿಕ್ಕರ್ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಸ್‌ನ ಅಸೋಸಿಯೇಟ್ ಸದಸ್ಯೆ ಸ್ವಾತಿ ರಾವ್ ಅವರ ಪ್ರಕಾರ, ಪುಟಿನ್ ಶೃಂಗಸಭೆಯಿಂದ ದೂರ ಇರುವುದು ಉಕ್ರೇನ್‌ನೊಂದಿಗಿನ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದ ಪ್ರತ್ಯೇಕತೆಯ ಪ್ರತಿಬಿಂಬವಾಗಿದೆ. "ನೋಡಿ, ಕಳೆದ ವರ್ಷ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಿರಲಿಲ್ಲ. ಕಳೆದ ತಿಂಗಳು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಶೃಂಗಸಭೆಯಲ್ಲಿ ಅವರು ಭಾಗವಹಿಸಲಿಲ್ಲ'' ಎಂದು ಸ್ವಾತಿ ರಾವ್ 'ಈಟಿವಿ ಭಾರತ್'ಗೆ ತಿಳಿಸಿದರು.
ಉಕ್ರೇನ್‌ನಲ್ಲಿನ ಯುದ್ಧಕ್ಕಾಗಿ ಪುಟಿನ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ (ಐಸಿಸಿ) ವಾರಂಟ್ ಹೊರಡಿಸದೆ. ದಕ್ಷಿಣ ಆಫ್ರಿಕಾ ಐಸಿಸಿಗೆ ಸಹಿ ಹಾಕಿದೆ. ಬ್ರಿಕ್ಸ್ ಶೃಂಗಸಭೆಗೆ ಖುದ್ದಾಗಿ ಹಾಜರಾಗದೇ ಪುಟಿನ್ ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಮುಜುಗರದಿಂದ ದಕ್ಷಿಣ ಆಫ್ರಿಕಾವನ್ನು ಪಾರು ಮಾಡಿದರು. ಆದರೆ, ಭಾರತ ಈ ಐಸಿಸಿಗೆ ಸಹಿ ಹಾಕಿಲ್ಲ. ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಿದ್ದರೆ, ರಷ್ಯಾ ಜತೆಗಿನ ಪ್ರಬಲ ಪಾಲುದಾರಿಕೆಯನ್ನು ಪ್ರದರ್ಶಿಸಲು ಭಾರತಕ್ಕೆ ಅವಕಾಶ ನೀಡಬಹುದಿತ್ತು.
ಈ ಕುರಿತು ಆಗಸ್ಟ್‌ನಲ್ಲಿ ಕೆಂಪು ಸಮುದ್ರದ ಬಂದರು ನಗರವಾದ ಜೆಡ್ಡಾದಲ್ಲಿ ಸೌದಿ ಅರೇಬಿಯಾ ನಡೆಸಿದ ಉಕ್ರೇನ್‌ನಲ್ಲಿನ ಯುದ್ಧದ ಕುರಿತು ಅಂತರರಾಷ್ಟ್ರೀಯ ಶೃಂಗಸಭೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಸ್ವಾತಿ ರಾವ್, ''ಇದು ರಷ್ಯಾದ ಅಂತಾರಾಷ್ಟ್ರೀಯ ಪ್ರತ್ಯೇಕತೆ ತೋರಿಸುತ್ತದೆ. ಯುದ್ಧದಿಂದ ನೇರವಾಗಿ ಪರಿಣಾಮ ಬೀರದ ದೇಶಗಳಲ್ಲಿಯೂ ಸಹ ಆತಂಕದ ಭಾವನೆ ಬೆಳೆಯುತ್ತಿದೆ'' ಎಂದರು. ಸೌದಿ ಅರೇಬಿಯಾವು ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರೂ, ರಷ್ಯಾವನ್ನು ಆ ಶೃಂಗಸಭೆಗೆ ಆಹ್ವಾನಿಸಿರಲಿಲ್ಲ. ಆದಾಗ್ಯೂ, ಉಕ್ರೇನ್ಗೆ ಆಹ್ವಾನವಿತ್ತು. ಭಾರತವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರತಿನಿಧಿಸಿದ್ದರು.
ಕಳೆದ ವರ್ಷ ಜುಲೈನಲ್ಲಿ ವಿಶ್ವಸಂಸ್ಥೆಯು ಉಕ್ರೇನ್, ಟರ್ಕಿ ಮತ್ತು ರಷ್ಯಾ ನಡುವಿನ ಪ್ರಾಣಿ ಹಾನಿ ಉಳಿಸುವ ಒಪ್ಪಂದಕ್ಕೆ ಸಹಾಯ ಮಾಡಿತ್ತು. ಇದು ಕಪ್ಪು ಸಮುದ್ರದ ಅಂತರರಾಷ್ಟ್ರೀಯ ನೀರಿನ ಮೂಲಕ ಲಕ್ಷಾಂತರ ಟನ್‌ಗಳಷ್ಟು ಅಗತ್ಯವಿರುವ ಧಾನ್ಯದ ರಫ್ತುಗಳ ಸಾಗಣೆಯನ್ನು ಪುನರಾರಂಭಿಸಲು ಉಕ್ರೇನ್ಅನ್ನು ಸಕ್ರಿಯಗೊಳಿಸಿತು. ಈ ಒಪ್ಪಂದವು ಲಕ್ಷಾಂತರ ಟನ್‌ಗಳಷ್ಟು ಧಾನ್ಯ ಮತ್ತು ಇತರ ಆಹಾರಗಳನ್ನು ತೆರೆಯಲು ಅನುವು ಮಾಡಿತ್ತು. ಇಲ್ಲದಿದ್ದರೆ ಅವುಗಳು ಉಕ್ರೇನ್‌ನಲ್ಲೇ ಉಳಿಯುತ್ತಿದ್ದವು. ಕಪ್ಪು ಸಮುದ್ರದ ಧಾನ್ಯ ಉಪಕ್ರಮವು ಪ್ರಪಂಚದಾದ್ಯಂತ ವಿಶೇಷವಾಗಿ ಆಫ್ರಿಕಾದಲ್ಲಿ ಅಗತ್ಯವಿರುವ ಜನರಿಗೆ ಹಾಗೂ ಕಡಿಮೆ ಆದಾಯದ ದೇಶಗಳಿಗೆ ನೇರವಾಗಿ ಅಗತ್ಯವಿರುವ ಧಾನ್ಯಗಳನ್ನು ತಲುಪಿಸುವ ಮೂಲಕ ಆಹಾರದ ಬೆಲೆಗಳನ್ನು ಕಡಿಮೆ ಮಾಡಲು ನೆರವಾಗಿತ್ತು.
ಈ ವರ್ಷ ಜುಲೈನಲ್ಲಿ ಕಪ್ಪು ಸಮುದ್ರದ ಮೂಲಕ ಸಾಗಣೆಯ ಸುರಕ್ಷತೆಯನ್ನು ಇನ್ಮುಂದೆ ಖಾತ್ರಿಪಡಿಸುವುದಿಲ್ಲ ಎಂದು ರಷ್ಯಾ ಘೋಷಿಸಿದೆ. ರಷ್ಯಾವನ್ನು ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ಸಂಪರ್ಕಿಸುವ ಕೆರ್ಷ್ ಸೇತುವೆಯ ಮೇಲಿನ ಸ್ಫೋಟದ ನಂತರ ಈ ನಿರ್ಧಾರ ಪ್ರಕಟಿಸಿದೆ. ಒಂದು ವರ್ಷ ಹಳೆಯದಾದ ಕಪ್ಪು ಸಮುದ್ರದ ಧಾನ್ಯ ಉಪಕ್ರಮವು ತನ್ನ ದೇಶದ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ಪುಟಿನ್ ಕೋಪಗೊಂಡಿದ್ದಾರೆ.
ಜುಲೈ ಕೊನೆಯ ವಾರದಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ರಷ್ಯಾ-ಆಫ್ರಿಕಾ ಶೃಂಗಸಭೆಯಲ್ಲಿ ಆಫ್ರಿಕನ್ ದೇಶಗಳ ನಾಯಕರು ಧಾನ್ಯ ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಪುಟಿನ್ ಅವರಿಗೆ ಮನವಿ ಮಾಡಿದ್ದಾರೆ. ಆದರೆ, ತನ್ನ ಬೇಡಿಕೆಗಳನ್ನು ಈಡೇರಿಸುವವರೆಗೆ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಪುಟಿನ್ ನಿರಾಕರಿಸಿದ್ದಾರೆ. ಬದಲಿಗೆ ಉಚಿತವಾಗಿ ಆಹಾರ ಧಾನ್ಯವನ್ನು ನೀಡುವುದಾಗಿ ತಿಳಿಸಿದ್ದಾರೆ. ಇತ್ತ, ಆಫ್ರಿಕನ್ನರು ಸ್ವೀಕರಿಸಲು ನಿರಾಕರಿಸಿ ಧಾನ್ಯ ಒಪ್ಪಂದದ ಪುನರುಜ್ಜೀವನಕ್ಕೆ ಒತ್ತಾಯಿಸಿದ್ದಾರೆ. "ಉಕ್ರೇನ್‌ನಲ್ಲಿನ ಯುದ್ಧದಲ್ಲಿ ಅದರ ತಪ್ಪು ಲೆಕ್ಕಾಚಾರದಿಂದಾಗಿ ರಷ್ಯಾ ಪ್ರತಿಷ್ಠೆಯ ಹಾನಿಯಿಂದ ಬಳಲುತ್ತಿದೆ" ಎಂದು ಸ್ವಾತಿ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಕ್ಸಿ ಜಿನ್‌ಪಿಂಗ್ ಗೈರು: ಮತ್ತೊಂದೆಡೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಜಿ20 ಶೃಂಗಸಭೆಯಿಂದ ಹೊರಗುಳಿದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಚೀನಾದಲ್ಲಿನ ಆಂತರಿಕ ರಾಜಕೀಯ ಬೆಳವಣಿಗೆಗಳಿಂದಾಗಿ ಜಿನ್‌ಪಿಂಗ್ ಈ ಸಭೆಯಿಂದ ದೂರ ಉಳಿಯುವಂತಾಗಿದೆ ಎಂದು ವರದಿಗಳು ಸೂಚಿಸಿವೆ. ಅಧ್ಯಕ್ಷ ಕ್ಸಿ ಬದಲಿಗೆ ಪ್ರೀಮಿಯರ್ ಲಿ ಕಿಯಾಂಗ್ ಚೀನಾವನ್ನು ಪ್ರತಿನಿಧಿಸುತ್ತಿದ್ದಾರೆ.
ಚೀನಾ ಕಳೆದ ತಿಂಗಳು ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಷಯ್ ಚಿನ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ವಿವಾದಿತ ಪ್ರದೇಶಗಳನ್ನು ತನ್ನ ಭೂಪ್ರದೇಶದ ಭಾಗಗಳಾಗಿ ಚಿತ್ರಿಸಿದ ಹೊಸ ನಕ್ಷೆ ಬಿಡುಗಡೆ ಬೆನ್ನಲ್ಲೇ ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿ ಆಗುತ್ತಿದ್ದಾರೆ. ಇದು ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ ಮತ್ತು ತೈವಾನ್‌ನಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾತಿ ರಾವ್, ''ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ (ಇಯು)ನಂತಹ ತನ್ನ ಸಾಂಪ್ರದಾಯಿಕ ವಿರೋಧಿಗಳನ್ನು ಹೊಂದಿರುವ ಜಿ20ನ ಪ್ರಾಮುಖ್ಯತೆಯನ್ನು ಚೀನಾ ಈಗ ದುರ್ಬಲಗೊಳಿಸಲು ಬಯಸುತ್ತಿದೆ'' ಎಂದು ಹೇಳಿದ್ದಾರೆ.
ಅಮೆರಿಕ ಜೊತೆ ವ್ಯಾಪಾರ ಮಾತುಕತೆಗೆ ಚೀನಾ ಯಾವುದೇ ಒಲವನ್ನು ತೋರಿಸುತ್ತಿಲ್ಲವಾದರೂ ಇಯು ತೈವಾನ್ ಮತ್ತು ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಬೀಜಿಂಗ್‌ನೊಂದಿಗೆ ಸಮಸ್ಯೆಗಳನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಇಟಲಿ ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (ಬಿಆರ್ಐ) ನಿಂದ ಹೊರಬಂದಿತ್ತು. ಜಪಾನ್‌ನ ಪೂರ್ವ ಕರಾವಳಿಯಿಂದ ಆಫ್ರಿಕಾದ ಪೂರ್ವ ಕರಾವಳಿಯವರೆಗೆ ವ್ಯಾಪಿಸಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪ್ರಭಾವದ ಕಾರ್ಯಾಚರಣೆಯನ್ನು ಫ್ರಾನ್ಸ್ ಕೂಡ ಭೇದಿಸುತ್ತಿದೆ.
ಸ್ವಾತಿ ರಾವ್ ಪ್ರಕಾರ, 'ಜಿ-20 ಶೃಂಗಸಭೆಯನ್ನು ದೂರ ಉಳಿಯುವ ಕ್ಸಿ ಜಿನ್‌ಪಿಂಗ್ ಅವರ ನಿರ್ಧಾರವು ಇತ್ತೀಚಿನ ಬ್ರಿಕ್ಸ್ ವಿಸ್ತರಣೆಯಿಂದಲೂ ಪ್ರಚೋದಿಸಲ್ಪಟ್ಟಿರಬಹುದು. ಜೋಹಾನ್ಸ್‌ಬರ್ಗ್ ಬ್ರಿಕ್ಸ್ ಶೃಂಗಸಭೆಯಲ್ಲಿ ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಸೇರಿ ಆರು ರಾಷ್ಟ್ರಗಳನ್ನು ತಮ್ಮಗುಂಪಿಗೆ ಸೇರ್ಪಡೆ ಮಾಡಿಕೊಳ್ಳಲು ಸಮ್ಮತಿಸಲಾಗಿದೆ. ಈ ಎಲ್ಲ ದೇಶಗಳು ಚೀನಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಪಶ್ಚಿಮ ಪ್ರಾಬಲ್ಯದ ಜಿ7ಗೆ ಪರ್ಯಾಯವಾಗಿ ಬ್ರಿಕ್ಸ್ಅನ್ನು ಯೋಜಿಸಲು ಚೀನಾ ಬಯಸುತ್ತದೆ. ಜಿ20 ಸದಸ್ಯರಾಗಿರುವ ದೇಶಗಳು, ಭಾರತ ಮತ್ತು ಬ್ರೆಜಿಲ್ ಬಣವನ್ನು ಪಶ್ಚಿಮ ವಿರೋಧಿ ಎಂದು ತೋರಿಸಲು ಬಯಸುವುದಿಲ್ಲ.
''ಬ್ರಿಕ್ಸ್‌ನ ವಿಸ್ತರಣೆಯೊಂದಿಗೆ ತಾನು ಬಯಸಿದ್ದನ್ನು ಪಡೆದುಕೊಂಡಿದೆ ಎಂದು ಚೀನಾ ಭಾವಿಸುತ್ತಿದೆ'' ಎಂದು ರಾವ್ ತಿಳಿಸಿದ್ದಾರೆ. "ಹಾಗಾದರೆ, ಜಿ20ರ ಪ್ರಾಮುಖ್ಯತೆ ಏನು?. ದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪುಟಿನ್ ಮತ್ತು ಕ್ಸಿ ಭಾಗವಹಿಸದಿರುವುದು ಒಂದು ರೀತಿಯಲ್ಲಿ ಒಳ್ಳೆಯದು. ಇಲ್ಲದಿದ್ದರೆ, ಹಲವಾರು ಸಭೆಗಳನ್ನು ಸಭಾತ್ಯಾಗ ಮತ್ತು ಪ್ರತಿಭಟನೆಗಳಿಂದ ಗುರುತಿಸಬೇಕಾಗುತ್ತಿತ್ತು'' ಎಂದು ಅವರು ಹೇಳಿದ್ದಾರೆ.
''ನವದೆಹಲಿ ಶೃಂಗಸಭೆಯ ಕೊನೆಯಲ್ಲಿ ಜಂಟಿ ಹೇಳಿಕೆಯಲ್ಲಿ ನಾವು ಏನನ್ನು ನಿರೀಕ್ಷಿಸಬಹುದು?. ನನ್ನ ಅಭಿಪ್ರಾಯದಲ್ಲಿ ಯಾವುದೇ ಜಂಟಿ ಹೇಳಿಕೆ ಇರುವುದಿಲ್ಲ. ಉಕ್ರೇನ್‌ನೊಂದಿಗೆ ರಷ್ಯಾದ ಯುದ್ಧವನ್ನು ಅನೇಕ ರಾಷ್ಟ್ರಗಳು ವಿರೋಧಿಸುತ್ತವೆ ಮತ್ತು ವಿರೋಧಿಸುತ್ತವೆ. ಬದಲಿಗೆ, ಹವಾಮಾನ ಬದಲಾವಣೆ, ಡಿಜಿಟಲ್ ಆರ್ಥಿಕತೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಸಮಸ್ಯೆಗಳನ್ನು ಒಳಗೊಂಡಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮೇಲೆ ಭಾರತ ಗಮನಹರಿಸಬೇಕು ಮತ್ತು ಇದನ್ನು ಪೂರೈಸಿಲು ಪ್ರಯತ್ನಿಸಬೇಕು" ಎಂದು ರಾವ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧ ವಿಷಯದಲ್ಲಿ ಭಾರತದ ನಿಲುವನ್ನು ಪ್ರತಿಪಕ್ಷಗಳು ಒಪ್ಪುತ್ತವೆ: ರಾಹುಲ್ ಗಾಂಧಿ