ಜಮುಯಿ (ಬಿಹಾರ): ಭಾರತದ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕ ಮೂಲದ ಅಮೆಜಾನ್ ಕಂಪನಿಗೆ ಬಿಹಾರದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದಾನೆ. ಸಂಬಳ ಕೇಳಿದರೆ ಹೌಹಾರುವುದು ಖಂಡಿತ. ಈ ವಿದ್ಯಾರ್ಥಿಗೆ ಅಮೆಜಾನ್ ಕಂಪನಿ ಬರೋಬ್ಬರಿ 1.08 ಕೋಟಿ ನೀಡಲು ಸಿದ್ಧವಾಗಿದೆ.
ಪಾಟ್ನಾದ ಎನ್ಐಟಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅಭಿಷೇಕ್ ಕುಮಾರ್ ಅಮೆಜಾನ್ಗೆ ಆಯ್ಕೆಯಾದ ಪ್ರತಿಭಾವಂತ. ಎನ್ಐಟಿಗೆ ಗೂಗಲ್, ಫೇಸ್ಬುಕ್, ಟ್ವಿಟರ್ ಸೇರಿದಂತೆ ಜಾಗತಿಕ ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ಅರಸಿ ಬರುತ್ತವೆ. ಇದೇ ರೀತಿ ಅಭಿಷೇಕ್ ಕುಮಾರ್ಅವರನ್ನು ಅಮೆಜಾನ್ 1.08 ಕೋಟಿ ಸಂಬಳ ಕೊಟ್ಟು ಉದ್ಯೋಗ ನೀಡಿದೆ.
ಅಭಿಷೇಕ್ 2021 ಡಿಸೆಂಬರ್ 14 ರಂದು ಕೋಡಿಂಗ್ ಪರೀಕ್ಷೆ ತೆಗೆದುಕೊಂಡರು. ಏಪ್ರಿಲ್ 13 ರಂದು ಮೂರು ಸುತ್ತಿನ ಸಂದರ್ಶನಗಳನ್ನು ಪಾಸ್ ಮಾಡಿದ್ದರು. 2022 ಏಪ್ರಿಲ್ 21 ರಂದು ಅಮೆಜಾನ್ನಿಂದ ಉದ್ಯೋಗದ ದೃಢೀಕರಣ ಪಡೆದುಕೊಂಡರು. ಭಾರಿ ಸಂಬಳ ಪಡೆದ ಅಭಿಷೇಕ್ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಸೆಪ್ಟೆಂಬರ್ನಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ಕೆಲಸಕ್ಕೆ ತೆರಳಲಿದ್ದಾರೆ.
ಇದಕ್ಕೂ ಮೊದಲು ಪಾಟ್ನಾದ ಎನ್‌ಐಟಿಯ ಅದಿತಿ ತಿವಾರಿ ಫೇಸ್‌ಬುಕ್‌ನಿಂದ ವಾರ್ಷಿಕವಾಗಿ 1.6 ಕೋಟಿ ರೂ.ಗಳ ಸಂಬಳದ ಆಫರ್ ಪಡೆದಿದ್ದರು. ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್ ಮುರಿದಿದ್ದಾರೆ.