ಕರ್ನೂಲ್(ಆಂಧ್ರಪ್ರದೇಶ): ರಜೆಯ ಮೇಲೆ ತನ್ನೂರಿಗೆ ಬರುತ್ತಿದ್ದ ಯೋಧ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಪತಿ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿದ ಕೂಡಲೇ ಗರ್ಭಿಣಿ ಪತ್ನಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂದಾವರಂ ವಲಯದ ಕನಕವೀಡು ಪೇಟದಲ್ಲಿ ನಡೆದಿದೆ.
ಕರ್ನೂಲ್ ಜಿಲ್ಲೆಯ ಕನಕವೀಡು ಪೇಟದ ಕುರುವ ನಾಗಪ್ಪ ಮತ್ತು ಭೀಮಕ್ಕ ಎಂಬುವರ ಮಗ ಮನೋಹರ್(29) ಮೃತ ಯೋಧ. ಇವರು ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆ ಮೇಲೆ ಸ್ವಗ್ರಾಮಕ್ಕೆ ಬರುತ್ತಿದ್ದರು. ಅಕ್ಟೋಬರ್ 7 ರಂದು ಅವರು ಮಧ್ಯಪ್ರದೇಶದಲ್ಲಿ ರೈಲಿನಿಂದ ಇಳಿದು, ಮತ್ತೊಂದು ರೈಲಿಗೆ ಹತ್ತುವಾಗ ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಮನೋಹರ್, ಮೂರು ವರ್ಷಗಳ ಹಿಂದೆ ರಮಾದೇವಿ ಎಂಬವರನ್ನು ಮದುವೆಯಾಗಿದ್ದು, ಆಕೆ ಗರ್ಭಿಣಿಯಾಗಿದ್ದಾಳೆ. ಅವರು ತನ್ನ ತಾಯಿಯ ಮನೆಯಲ್ಲಿ (ನಂದಾವರಂ ಮಂಡಲ, ಗುರಜಾಲ) ವಾಸಿಸುತ್ತಿದ್ದರು. ಪತಿಯ ಸಾವಿನ ಸುದ್ದಿ ಕೇಳಿ ಮನನೊಂದ ರಮಾದೇವಿ, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ರಮಾದೇವಿ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಪುಷ್ಪಕ್ ಎಕ್ಸ್ಪ್ರೆಸ್ ಗ್ಯಾಂಗ್ರೇಪ್ ಕೇಸ್: ಮತ್ತಿಬ್ಬರು ಆರೋಪಿಗಳು ಅರೆಸ್ಟ್