ಥಾಣೆ: (ಮಹಾರಾಷ್ಟ್ರ) : ಕಂಟೈನರ್ ಟ್ರಕ್ ಹಾಗೂ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಜೀಪ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಭಿವಂಡಿ ತಾಲೂಕಿನ ಖಡ್ವಲಿ ಗ್ರಾಮದ ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಭೀಕರ ರಸ್ತೆ ಅಪಘಾತದಲ್ಲಿ ಜೀಪಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಐದರಿಂದ ಆರು ಜನ ಗಾಯಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಪ್ಪು ಮತ್ತು ಹಳದಿ ಬಣ್ಣದ ಪ್ಯಾಸೆಂಜರ್ ಜೀಪಿಗೆ ಎದುರಿನಿಂದ ಬರುತ್ತಿದ್ದ ಕಂಟೈನರ್ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಜೀಪು ಅರವತ್ತು ಅಡಿ ದೂರಕ್ಕೆ ಎಸೆಯಲ್ಪಟ್ಟಿದೆ. ಈ ಭೀಕರ ಅಪಘಾತದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ನಾಲ್ವರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಂಟೈನರ್ ಮುಂಬೈಗೆ ತೆರಳುತ್ತಿದ್ದರೆ, ಜೀಪ್ ಪ್ರಯಾಣಿಕರನ್ನು ಕರೆದುಕೊಂಡು ಪಾಡ್ಘಾ ಗ್ರಾಮದಿಂದ ಖಡ್ವಾಲಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿತ್ತು. ಜನನಿಬಿಡ ಖಾಡವಲಿ ಫಾಟಾದಲ್ಲಿ ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಟಿಪ್ಪರ್ ಹಿಂಭಾಗ ಸಿಲುಕಿಕೊಂಡು ಕಿಲೋಮೀಟರ್ ದೂರ ಸಾಗಿದ ಕಾರು: ವಿಡಿಯೋ
ಚಿನ್ಮಯಿ ವಿಕಾಸ್ ಶಿಂಧೆ (15), ಚೈತಾಲಿ ಸುಶಾಂತ್ ಪಿಂಪಲ್ (27), ಸಂತೋಷ್ ಅನಂತ್ ಜಾಧವ್ (50), ವಸಂತ ಧರ್ಮ ಜಾಧವ್ (51), ರಿಯಾ ಕಿಶೋರ್ ಪರ್ಸೇಧಿ ಮತ್ತು ಪ್ರಜ್ವಲ್ ಶಂಕರ್ ಫಿರ್ಕೆ ಮೃತರು. ಗಾಯಗೊಂಡ ಕೃನಾಲ್ ಜ್ಞಾನೇಶ್ವರ್ ಭಮ್ರೆ (22), ಚೇತನಾ ಗನೇಹ್ಸ್ ವಝೆ (29) ಮತ್ತು ದಿಲೀಪ್ ಕುಮಾರ್ ವಿಶ್ವಕರ್ಮ (30) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಇದೀಗ ವಾಹಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.
ಒಂದು ಬದಿಯಲ್ಲಿ ಭಾರೀ ಪ್ರಮಾಣದಲ್ಲಿ ಕರ್ವ್ ಇರುವುದರಿಂದ ಖಾಡವಲಿ ಫಾಟ್ನಲ್ಲಿ ಆಗಾಗ್ಗೆ ಈ ರೀತಿಯ ಅಪಘಾತಗಳು ಸಂಭವಿಸುತ್ತಲೇ ಇವೆ. ಮುಂದಿನ ದಿನಮಾನಗಳಲ್ಲಿ ಇಂತಹ ಅಪಘಾತಗಳನ್ನು ಮತ್ತೆ ನಡೆಯದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಸಂಬಂಧಿತ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ಈ ಭೀಕರ ಅಪಘಾತದಲ್ಲಿ ಪ್ರಯಾಣಿಕರ ಜೀಪ್ ನಜ್ಜುಗುಜ್ಜಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತರಲ್ಲಿ ವಿದ್ಯಾರ್ಥಿಗಳೂ ಸೇರಿದ್ದಾರೆ. ಘಟನೆ ಸಂಬಂಧ ಪಾಡ್ಘಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಅಕ್ಕಲಕೋಟೆ ಬಳಿ ಭೀಕರ ರಸ್ತೆ ಅಪಘಾತ: ಕಲಬುರಗಿ ಜಿಲ್ಲೆಯ ಆರು ಜನರ ದುರ್ಮರಣ
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ಬಳಿ ಇತ್ತೀಚೆಗೆ ಕೂಡ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕಲಬುರಗಿ ಜಿಲ್ಲೆಯ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. 10 ಮಂದಿ ಗಾಯಗೊಂಡಿದ್ದರು. ಕ್ರೂಸರ್ ವಾಹನದಲ್ಲಿ ಅಕ್ಕಲಕೋಟೆಯ ಸ್ವಾಮಿ ಸಮರ್ಥ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದರು. ದರ್ಶನ ಪಡೆದು ಮರಳಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು.