ಪಾಟ್ನಾ(ಬಿಹಾರ): ಬ್ಯಾಂಕ್ನಲ್ಲಿ ಹಣ ವರ್ಗಾವಣೆ ವಿಚಾರದಲ್ಲಿ ಆಗಾಗ ತಪ್ಪುಗಳು ನಡೆಯುವುದು ಸರ್ವೇ ಸಾಮಾನ್ಯ. ಯಾರದೋ ಹಣ, ಇನ್ಯಾರದೋ ಖಾತೆಗೆ ಜಮಾ ಆಗುವುದು ಆಗಾಗ ನಡೆಯುತ್ತಿರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಖಾತೆಗೆ ಅಕಸ್ಮಾತಾಗಿ ಬಂದ ಹಣವನ್ನು ವಾಪಸ್ ನೀಡೋದಿಲ್ಲ ಎಂದು ಹಠ ಹಿಡಿದಿದ್ದಾನೆ.
ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗ್ರಾಮೀಣ ಬ್ಯಾಂಕ್ ಆಕಸ್ಮಿಕವಾಗಿ ಮಾಡಿಕೊಂಡ ತಪ್ಪಿನಿಂದಾಗಿ ಮಾನ್ಸಿ ಪೊಲೀಸ್ ಠಾಣೆಯ ಭಕ್ತಿಯಾರ್ಪುರ ಗ್ರಾಮದ ರಂಜಿತ್ ದಾಸ್ ಎಂಬಾತನ ಖಾತೆಗೆ 5.5 ಲಕ್ಷ ರೂಪಾಯಿ ಜಮಾ ಮಾಡಿದೆ. ಆ ಹಣವನ್ನು ಖರ್ಚು ಮಾಡಿಕೊಂಡಿರುವ ಆತ ವಾಪಸ್ ನೀಡಬೇಕೆಂದು ಕೇಳಿದಾಗ ಆ ಹಣವನ್ನು ವಾಪಸ್ ಕೊಡುವುದಿಲ್ಲ ಎಂದು ಆತ ಹೇಳುತ್ತಿದ್ದಾನೆ.
'ಮೋದಿ ಅಕೌಂಟ್ಗೆ ಹಣ ಹಾಕಿದ್ದಾರೆ..'
ಬ್ಯಾಂಕ್ನಿಂದ ಹಲವಾರು ಬಾರಿ ನೋಟಿಸ್ ನೀಡಿದ್ದರೂ, ಆತ ಹಣವನ್ನು ವಾಪಸ್ ಮಾಡಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆತ "ಈ ವರ್ಷದ ಮಾರ್ಚ್‌ನಲ್ಲಿ ನಾನು ಹಣವನ್ನು ಸ್ವೀಕರಿಸಿದಾಗ ನನಗೆ ತುಂಬಾ ಸಂತೋಷವಾಯಿತು' ಎಂದಿದ್ದಾನೆ.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಇದು ಮೊದಲ ಕಂತಾಗಿರಬಹುದು ಎಂದು ನಾನು ಭಾವಿಸಿದ್ದೆ. ಈಗ ಎಲ್ಲಾ ಹಣವನ್ನು ನಾನು ಖರ್ಚು ಮಾಡಿಕೊಂಡಿದ್ದು, ಈಗ ನನ್ನ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ' ಎಂದಿದ್ದಾನೆ.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮಾನ್ಸಿ ಪೊಲೀಸರಿಗೆ ದೂರು ನೀಡಿದ್ದು , ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಂಗಾಳ ನಂತರ ಬಿಹಾರದಲ್ಲೂ ವೈರಲ್ ಫೀವರ್: ಈವರೆಗೆ 113 ಮಕ್ಕಳು ಆಸ್ಪತ್ರೆಗೆ ದಾಖಲು