ರಾಯ್‌ಪುರ (ಛತ್ತೀಸ್‌ಗಢ) : ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಛತ್ತೀಸ್‌ಗಢದಿಂದ 300 ಮೆಟ್ರಿಕ್ ಟನ್ ಸುಗಂಧಭರಿತ ಅಕ್ಕಿಯನ್ನು ರವಾನಿಸಲಾಗಿದೆ. 11 ಟ್ರಕ್ಗಳಲ್ಲಿ ತುಂಬಿರುವ ಅಕ್ಕಿಯು ಶನಿವಾರ ಅಯೋಧ್ಯೆಯತ್ತ ತೆರಳಿದವು.
ಇಲ್ಲಿನ ವಿಐಪಿ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಷ್ಣು ದೇಬ್ ಸಾಯಿ ಅವರು ಕೇಸರಿ ಧ್ವಜವನ್ನು ಹಾರಿಸುವ ಮೂಲಕ ಅಕ್ಕಿ ತುಂಬಿದ್ದ 11 ಟ್ರಕ್‌ಗಳು ಉತ್ತರಪ್ರದೇಶದತ್ತ ತೆರಳಲು ಚಾಲನೆ ನೀಡಿದರು. ಈ ವೇಳೆ ಸಚಿವರಾದ ಬ್ರಿಜ್‌ಮೋಹನ್ ಅಗರವಾಲ್, ಶ್ಯಾಮ್ ಬಿಹಾರಿ ಜೈಸ್ವಾಲ್, ದಯಾಳ್‌ದಾಸ್ ಬಾಘೇಲ್, ಲಕ್ಷ್ಮಿ ರಾಜ್‌ವಾಡೆ, ಬಿಜೆಪಿ ಸಂಸದ ಸುನಿಲ್ ಸೋನಿ ಇನ್ನಿತರ ಗಣ್ಯರು ಇದ್ದರು.
ಛತ್ತೀಸ್‌ಗಢ ಪ್ರದೇಶ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಸುಗಂಧಭರಿತ ಅಕ್ಕಿ ಅರ್ಪಣೆ ಸಮಾರಂಭ ಎಂಬ ಕಾರ್ಯಕ್ರಮವನ್ನು ನಡೆಸಿತು. ಇಲ್ಲಿ ಜನರಿಂದ ಕ್ರೋಢೀಕರಣವಾದ ಅಕ್ಕಿಯನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪ್ರಸಾದವಾಗಿ ಬಳಸಲು ನೀಡಲಾಗಿದೆ.
ಛತ್ತೀಸ್ಗಢಕ್ಕಿದೆ ರಾಮನ ನಂಟು: ಛತ್ತೀಸ್‌ಗಢಕ್ಕೂ ಶ್ರೀರಾಮನಿಗೂ ನಂಟಿದೆ. ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಚಂದ್‌ಖುರಿ ಎಂಬ ಹಳ್ಳಿಯನ್ನು ಶ್ರೀರಾಮನ ತಾಯಿ ಕೌಶಲ್ಯೆಯ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ರಾಮನ ಮೇಲೆ ಇಲ್ಲಿನ ಜನರಿಗೆ ವಿಶೇಷ ಭಕ್ತಿ. ಅನ್ನದ ಬಟ್ಟಲು ಎಂದೂ ಕರೆಸಿಕೊಳ್ಳುವ ಛತ್ತೀಸ್‌ಗಢದಿಂದ ಅಯೋಧ್ಯೆ ಕಾರ್ಯಕ್ರಮಕ್ಕೆ ಅಕ್ಕಿಯನ್ನು ಸಂಗ್ರಹಿಸಿ ರವಾನಿಸಲಾಗಿರುವುದು ಕೂಡ ಈ ಪ್ರತೀತಿಗೆ ಸಾಕ್ಷಿಯಾಗಿದೆ.
ಸಂಶೋಧಕರ ಪ್ರಕಾರ, ಭಗವಾನ್ ಶ್ರೀರಾಮನು 14 ವರ್ಷಗಳ ವನವಾಸದ ವೇಳೆ ಅಯೋಧ್ಯೆಯಿಂದ ಹೊರಟಾಗ ಇಂದಿನ ಛತ್ತೀಸ್‌ಗಢದ ಹಲವಾರು ಸ್ಥಳಗಳ ಮೂಲಕ ಹಾದು ಹೋಗಿದ್ದ. ಜೊತೆಗೆ ಚಂದ್‌ಖುರಿ ಗ್ರಾಮವು ಕೌಶಲ್ಯೆಯ ಜನ್ಮಸ್ಥಳವೆಂದು ಹೇಳಲಾಗಿದೆ. ಗ್ರಾಮದಲ್ಲಿ ಪುರಾತನ ಮಾತಾ ಕೌಶಲ್ಯ ದೇವಸ್ಥಾನವಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೊಸರೂಪ ನೀಡಲಾಗಿದೆ.
ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ನವೀಕರಿಸಲಾಗಿರುವ ರೈಲು ನಿಲ್ದಾಣ, ಹೊಸ ಸುಸಜ್ಜಿತ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಜೊತೆಗೆ ವಂದೇ ಭಾರತ, ಅಮೃತ್ ಭಾರತ್ ರೈಲುಗಳಿಗೂ ಚಾಲನೆ ನೀಡಿದರು. ನಗರದಲ್ಲಿ 15 ಕಿ.ಮೀ. ವರೆಗೂ ರೋಡ್ ಶೋ ನಡೆಸಿದರು. ಜನರು ಪ್ರಧಾನಿಗೆ ಪುಷ್ಪವೃಷ್ಟಿ ಸುರಿಸಿದರು. ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ: 550 ವರ್ಷಗಳ ಕಾಯುವಿಕೆಗೆ ಜ. 22 ರಂದು ಮುಕ್ತಿ, ಭಕ್ತರೇ ನೀವಿದ್ದ ಸ್ಥಳದಿಂದಲೇ ಶ್ರೀರಾಮನ ಪೂಜಿಸಿ: ಪ್ರಧಾನಿ ಮೋದಿ