ವಾರಂಗಲ್ (ತೆಲಂಗಾಣ): ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ವಾರಂಗಲ್‌ನಿಂದ ಹೈದರಾಬಾದ್‌ಗೆ ಮರಳುತ್ತಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಬೆಂಗಾವಲು ವಾಹನವನ್ನು ತಡೆಯಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ವಾರಂಗಲ್ನ ನೂತನ ಜಿಲ್ಲಾಧಿಕಾರಿ ಕಟ್ಟಡವನ್ನು ಉದ್ಘಾಟಿಸಿ ಕೆಸಿಆರ್ ವಾಪಸ್ ಬರುತ್ತಿದ್ದ ವೇಳೆ ಯುವಕರು ಉದ್ಯೋಗಗಳ ಕುರಿತಾಗಿ ಅಧಿಸೂಚನೆ ಹೊರಡಿಸುವಂತೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿ, ಕಾರು ನಿಲ್ಲಿಸಲು ಮುಂದಾಗಿದ್ದಾರೆ. ತಕ್ಷಣವೇ ಅಲ್ಲಿದ್ದ ಪೊಲೀಸರು ಮೂವರನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಬಂಧಿತ ಮೂವರ ಪೈಕಿ ಇಬ್ಬರು ನಿರುದ್ಯೋಗಿಗಳಾಗಿದ್ದು, ಒಬ್ಬ ಕಾಕತೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಾರಂಗಲ್ ಪೊಲೀಸ್ ಆಯುಕ್ತ ತರುಣ್ ಜೋಶಿ ತಿಳಿಸಿದ್ದಾರೆ.