ಮುಂಬೈ(ಮಹಾರಾಷ್ಟ್ರ): ಭಾರತದ ನೆಲದೊಳಗೆ ನಡೆದ ಭೀಕರ ಉಗ್ರರ ಅಟ್ಟಹಾಸದಲ್ಲಿ ಮುಂಬೈ ತಾಜ್ ಹೋಟೆಲ್ ಮೇಲೆ ನಡೆದಿದ್ದ ಘಟನೆ ದೇಶದ ಇತಿಹಾಸ ಪುಟದಲ್ಲಿ ಕರಾಳ ಅಧ್ಯಾಯವಾಗಿ ಉಳಿದಿದೆ. ಘಟನೆ ನಡೆದು ಇಂದಿಗೆ 14 ವರ್ಷ ಕಳೆದರೂ ಅದರ ಭೀಕರತೆ ಮಾತ್ರ ಇನ್ನೂ ಕಣ್ಣು ಮುಂದೆಯೇ ಇದೆ. ಸರಿಯಾಗಿ 14 ವರ್ಷಗಳ ಹಿಂದೆ 2008ರ ನವೆಂಬರ್ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು.
ಕೈಯಲ್ಲಿ ಮದ್ದುಗುಂಡು, ಬಂದೂಕು ಹಿಡಿದಿದ್ದ 10 ಮಂದಿ ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರರು ವಾಣಿಜ್ಯ ನಗರಿಯ ರಕ್ತದೋಕುಳಿಗೆ ಸಮುದ್ರ ದಾಟಿ ಬಂದಿದ್ದರು. ಈ ವೇಳೆ ದಾರಿಯಲ್ಲಿ ಸಿಕ್ಕವರಿಗೆಲ್ಲ ಗುಂಡು ಹಾರಿಸಿದ್ದ ಭಯೋತ್ಪಾದಕರು 166 ಮಂದಿಯ ಜೀವ ತೆಗೆದಿದ್ದರು. ಅಲ್ಲದೆ ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು.
![26 11 attacks mumbai Mumbai Terror Attack police to pay homage to martyrs Mumbai Terror Attack news ಭಾರತೀಯ ಇತಿಹಾಸ ಪುಟದಲ್ಲಿ ಮರೆಯಲಾಗದ ಕಹಿ ಘಟನೆ ಮುಂಬೈ ದಾಳಿಗೆ 14 ವರ್ಷ ಅಮಾಯಕರ ಬಲಿ ಪಡೆದಿದ್ದ ಉಗ್ರರು ಭದ್ರತಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಹುತಾತ್ಮ ಭಾರತ ನೆಲದೊಳಗೆ ನಡೆದ ಭೀಕರ ಉಗ್ರರ ಅಟ್ಟಹಾಸ ಮುಂಬೈ ತಾಜ್ ಹೋಟೆಲ್ ಮೇಲೆ ನಡೆದಿದ್ದ ಘಟನೆ ಘೋರ ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರರು ಮುಂಬೈ ಮಹಾನಗರ ತಲುಪಿದ್ದ 10 ಮಂದಿ ಉಗ್ರರು](https://etvbharatimages.akamaized.net/etvbharat/prod-images/13738549_61_13738549_1637894925254_2611newsroom_1669428384_917.png)
ಈ ಕಹಿ ಘಟನೆಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಘಟನೆಯಲ್ಲಿ ಮಡಿದವರಿಗಾಗಿ ಶ್ರದ್ಧಾಂಜಲಿ ಅರ್ಪಿಸುತ್ತ ಬಂದಿದ್ದಾರೆ. ಇಂದು ಸಹ ಈ ಕಾರ್ಯಕ್ರಮ ಜರುಗಲಿದ್ದು, ಇದರಲ್ಲಿ ಹುತಾತ್ಮರಾದ ಪೊಲೀಸ್ ಕುಟುಂಬಸ್ಥರು ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಲಿದ್ದಾರೆ.
9 ಉಗ್ರರು ಬಲಿ, ಕಸಬ್ ಸೆರೆ: ಮುಂಬೈ ಮಹಾನಗರ ತಲುಪಿದ್ದ 10 ಮಂದಿ ಉಗ್ರರು ಸಿಕ್ಕ-ಸಿಕ್ಕವರಿಗೆ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು. ಮೊದಲಿಗೆ ಇಲ್ಲಿನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಉಗ್ರರು, ರೈಲು ಬರುವುದನ್ನೇ ಕಾದಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದರು.
ಇದಾದ ಬಳಿಕ ನಾರಿಮನ್ ಹೌಸ್ ಕಾಂಪ್ಲೆಕ್ಸ್ ತಲುಪಿದ್ದ ಉಗ್ರರು ಅಲ್ಲಿಯೂ ಮನಸೋಯಿಚ್ಛೆ ಅಮಾಯಕರ ಬಲಿ ಪಡೆದರು. ಮೂರನೆಯದಾಗಿ ಲಿಯೋಪೋಲ್ಡ್ ಕೆಫೆಗೆ ನುಗ್ಗಿ ಹಲವರನ್ನು ಬಲಿ ಪಡೆದಿದ್ದರು. ಇದಾದ ಬಳಿಕ ಮುಂಬೈನ ಹೃದಯ ಭಾಗದಲ್ಲಿನ ತಾಜ್ ಹೋಟೆಲ್ನಲ್ಲಿ ಅಡಗಿ ಕುಳಿತಿದ್ದ ರಾಕ್ಷಸರು ಅಲ್ಲಿದ್ದ ನಾಗರಿಕರ ಮೇಲೆ ದಾಳಿ ಮಾಡಿದ್ದರು.
ನಾಲ್ಕು ದಿನಗಳ ಕಾಲ ಹೋಟೆಲ್ನಲ್ಲಿದ್ದ ಉಗ್ರರು, ಭದ್ರತಾ ಪಡೆಯ 18 ಯೋಧರನ್ನು ಕೊಂದಿದ್ದರು. ಆದರೆ ಒಟ್ಟು 10 ಮಂದಿ ಉಗ್ರರನ್ನು ಹತ್ಯೆ ಮಾಡಿದ್ದ ಭದ್ರತಾ ಪಡೆ ಉಗ್ರ ಅಜ್ಮಲ್ ಕಸಬ್ನನ್ನು ಜೀವಂತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅಜ್ಮಲ್ ಅಮಿರ್ ಕಸಬ್ನನ್ನು ನವೆಂಬರ್ 21, 2012ರಲ್ಲಿ ಪುಣೆಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.
ಓದಿ: ರೈತನನ್ನು ಮನೆಗೆ ಕರೆಯಿಸಿ 2 ಲಕ್ಷ ಲಂಚ ಪಡೆಯುತ್ತಿದ್ದ ತಹಶಿಲ್ದಾರ್.. ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ