ಲಖನೌ(ಉತ್ತರಪ್ರದೇಶ): 48 ಗಂಟೆಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಪ್ರದೇಶದಲ್ಲಿ ಭಾರಿ ನಷ್ಟ ಉಂಟಾಗಿದ್ದಲ್ಲದೆ, ವಿವಿಧೆಡೆ ಸಂಭವಿಸಿದ ಅವಘಢಡಗಳಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮನೆ ಕುಸಿತ ಪ್ರಕರಣಗಳಲ್ಲಿ ಹೆಚ್ಚು ಸಾವು ಉಂಟಾಗಿವೆ ಎಂದು ವರದಿಯಾಗಿದೆ.
ಕಳೆದ 48 ಗಂಟೆಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಎಲ್ಲಾ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ: ಇನ್ನು, ಭಾರಿ ಮಳೆಯಿಂದಾಗಿ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿದ್ದು, ಲಖನೌ, ನೋಯ್ಡಾ, ಗಾಜಿಯಾಬಾದ್, ಕಾನ್ಪುರ್, ರಾಂಪುರ ಮತ್ತು ಮೀರತ್‌ನಲ್ಲಿ ಶಾಲಾ- ಕಾಲೇಜುಗಳಿಗೆ 2 ದಿನ ರಜೆ ಘೋಷಿಸಲಾಗಿದೆ.
ಬಲ್ರಾಮ್‌ಪುರ ಜಿಲ್ಲೆಯ ಸುಮಾರು 400 ಹಳ್ಳಿಗಳು ಜಲಾವೃತವಾಗಿದ್ದು, ಗೋರಖ್‌ಪುರದ ಬರ್ಹಲ್‌ಗಂಜ್‌ನಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಲಖನೌನಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಜನರು ಎಚ್ಚರಿಕೆ ವಹಿಸಬೇಕು ಎಂದು ಅಲ್ಲಿನ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ನೀಡಿದೆ. ಜನದಟ್ಟಣೆಯ ಸ್ಥಳಗಳು ಮತ್ತು ಶಿಥಿಲಗೊಂಡ ಕಟ್ಟಡಗಳಿಂದ ಜನರು ಬೇರೆಗೆ ಸ್ಥಳಾಂತರ ಹೊಂದಲು ಸಲಹೆ ನೀಡಿದೆ. ಅಲ್ಲದೇ, ಮಳೆ ಸಂಬಂಧಿತ ಸಮಸ್ಯೆಗಳಿಂದ ಸಂತ್ರಸ್ತರಾಗಿರುವ ಜನರಿಗಾಗಿ ಹಲವಾರು ಜಿಲ್ಲೆಗಳಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ.