ಪ್ರತಾಪ್ಗಢ(ಉತ್ತರ ಪ್ರದೇಶ): ಮದುವೆ ಸಮಾರಂಭದಿಂದ ಖುಷಿ ಖುಷಿಯಾಗಿ ಮನೆಗೆ ವಾಪಸಾಗುತ್ತಿದ್ದ ವೇಳೆ ನಿಂತ ಟ್ರಕ್ನ ಹಿಂಬದಿಗೆ ಬೊಲೆರೊ ಕಾರು ಡಿಕ್ಕಿ ಹೊಡೆದ ಪರಿಣಾಮ 14 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಣಿಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಬದ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಶೇಖ್ಪುರ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿ ಬೊಲೆರೊ ವಾಹನದಲ್ಲಿ 14 ಜನ ತಮ್ಮ ಸ್ವಗ್ರಾಮವಾದ ಜಿಗ್ರಾಪುರ್ ಚೌಸ್ಗೆ ಮರಳುತ್ತಿದ್ದರು. ಈ ವೇಳೆ ದೇಶರಾಜ್ ಇನಾರಾ ಗ್ರಾಮದ ಬಳಿ ಚಾಲಕನಿಗೆ ನಿದ್ರೆ ಬಂದಿದೆ ಎನ್ನಲಾಗ್ತಿದೆ.
ಅತೀ ವೇಗವಾಗಿ ಚಲಿಸುತ್ತಿದ್ದ ಬೊಲೆರೊ ವಾಹನ ರಸ್ತೆ ಬದಿ ನಿಂತಿದ್ದ ಟ್ರಕ್ನ ಹಿಂಬದಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯ ಆರಂಭಿಸಿದ್ರೂ ಪ್ರಯೋಜನವಾಗಲಿಲ್ಲ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಜಖಂಗೊಂಡಿದ್ದು, ಬೊಲೆರೊದಲ್ಲಿದ್ದ 14 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗ್ಯಾಸ್ ಕಟ್ಟರ್ ಸಹಾಯದಿಂದ ಮೃತದೇಹಗಳನ್ನು ಕಾರಿನಿಂದ ಹೊರ ತೆಗೆದರು. ಮೃತರನ್ನು ಬಾಬು, ದಿನೇಶ್, ಪವನ್ ಕುಮಾರ್, ದಯಾರಾಮ್, ಅಮನ್ ಸೇರಿದಂತೆ 7 ಮಕ್ಕಳು ಮತ್ತು ರಾಮ್‌ಸಮುಜ್, ಅನ್ಶ್, ಗೌರವ್, ನಾನ್ ಭೈಯಾ, ಸಚಿನ್, ಹಿಮಾಂಶು, ಮಿಥಿಲೇಶ್, ಅಭಿಮನ್ಯು, ಪರಾಸ್ ನಾಥ್ ಯಾದವ್ ಎಂದು ಗುರುತಿಸಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದು, ಸುದ್ದಿ ತಿಳಿದ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.
ಅತೀ ವೇಗವಾಗಿ ಚಲಿಸುತ್ತಿದ್ದ ಚಾಲಕ ನಿದ್ರೆಗೆ ಜಾರಿದ್ದರಿಂದ ಈ ಅಪಘಾತ ಸಂಭವಿರಬಹುದೆಂದು ಶಂಕಿಸಲಾಗಿದೆ. ಮೃತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಮನೆಗೆ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿ 14 ಜನ ಸಾವನ್ನಪ್ಪಿದ್ದಾರೆ ಎಂದು ಪ್ರತಾಪ್ಗಢ ಎಸ್ಪಿ ಅನುರಾಗ್ ಆರ್ಯ ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಮಣಿಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.