ಕರ್ನಾಟಕ

karnataka

ETV Bharat / videos

ಕಾರವಾರದಲ್ಲಿ ವಿಶಿಷ್ಟ ಸಂಪ್ರದಾಯದ ಮಾರ್ಕೆಪೂನವ್ ಜಾತ್ರಾ ಮಹೋತ್ಸವ: ವಿಡಿಯೋ - MARKEPUNAV JATRA

By ETV Bharat Karnataka Team

Published : Feb 13, 2025, 9:05 PM IST

ಕಾರವಾರ: ಹೆಣ್ಣುಮಕ್ಕಳು ಕುಲದೇವರಿಗೆ ದೀಪ ಹಚ್ಚುವ ವಿಶಿಷ್ಟ ಸಂಪ್ರದಾಯದ ಮಾರ್ಕೆಪೂನವ್ ಜಾತ್ರಾ ಮಹೋತ್ಸವ ಕರ್ನಾಟಕ-ಗೋವಾ ಗಡಿಭಾಗವಾದ ತಾಲ್ಲೂಕಿನ ಮಾಜಾಳಿಯಲ್ಲಿ ಇಂದು ನಡೆಯಿತು.

ಶ್ರೀರಾಮನಾಥ ಕ್ಷೇತ್ರದ ಪರಿವಾರ ದೇವರ ಜಾತ್ರೆ ಇದಾಗಿದ್ದು, ಪ್ರತಿ ವರ್ಷ ಶುದ್ಧ ಪೂರ್ಣಿಮೆಯಂದು ಜರುಗುತ್ತದೆ. ಹುಣ್ಣಿಮೆಗೆ ಕೊಂಕಣಿ ಭಾಷೆಯಲ್ಲಿ 'ಪೂನವ್' ಎನ್ನುತ್ತಾರೆ. ಹೀಗಾಗಿ ಈ ಜಾತ್ರೆಯನ್ನು ಮಾರ್ಕೆಪೂನವ್ ಎಂದು ಕರೆಯುತ್ತಾರೆ.

ಹೆಣ್ಣುಮಕ್ಕಳು ಕುಲದೇವರಿಗೆ ದೀವಜ್ (ದೀಪ) ನೀಡಿ ಹರಕೆ ಅರ್ಪಿಸಿದರು. ಈ ಗ್ರಾಮದ ಹುಡುಗಿ ಅಥವಾ ಸೊಸೆಯಾಗಿ ಗ್ರಾಮಕ್ಕೆ ಕಾಲಿರಿಸಿದವಳು ದೇವಸ್ಥಾನದ ಆವರಣದಿಂದ ದೀಪ ಬೆಳಗಿಕೊಂಡು ಬಂಡಿ ಹೊರಟ ಬಳಿಕ, ತಲೆ ಮೇಲೆ ದೀಪವನ್ನಿರಿಸಿಕೊಂಡು ದಾಡ್ ದೇವಸ್ಥಾನದಿಂದ ಮಾರಿಕಾದೇವಿ (ದೇವತಿ) ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪ ತೋರಿಸಿ ಭಕ್ತಿ ಪ್ರದರ್ಶಿಸಿದರು.

ಕಾಕಡದಿಂದ ಸಿಂಗಾರಗೊಳ್ಳುವ ಬಂಡಿ ಎಳೆದ ಭಕ್ತರು: ಜಾತ್ರೆಯಲ್ಲಿ ಕಾಕಡ ಹೂವಿನಿಂದ ಎರಡು ಬಂಡಿಯನ್ನು ಅಲಂಕಾರಗೊಳಿಸಲಾಗಿತ್ತು. ಇದನ್ನು ಸ್ಥಳೀಯರು ಒಂದು ಗಂಡು ಇನ್ನೊಂದು ಹೆಣ್ಣು ಎಂದೇ ನಂಬುತ್ತಾರೆ. ಗಂಡು ಎಂದು ನಂಬುವ ಬಂಡಿ ಮುಂದೆ ಸಾಗಿದರೆ, ಹೆಣ್ಣು ಬಂಡಿ ಹಿಂದಿನಿಂದ ಸಾಗುತ್ತದೆ.

ಜಾತ್ರೆಯಲ್ಲಿ ಅಲಂಕೃತಗೊಂಡ ಈ ಬಂಡಿ ಎಳೆಯುವುದೇ ಭಕ್ತರಿಗೆ ಮತ್ತೊಂದು ವಿಶೇಷ. ಬಂಡಿಯನ್ನು ಭಕ್ತರು ದಾಡ್ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ಬಂಡಿ ಯೋ.. ಬಂಡಿ ಯೋ.. ಎಂದು ಘೋಷಣೆ ಕೂಗುತ್ತಾ ಎಳೆದರು. ಜಾತ್ರೆಗೆ ಕಾರವಾರ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿರುವುದು ಕಂಡುಬಂತು. 

ABOUT THE AUTHOR

...view details