ಮೇಘಾಲಯದಲ್ಲಿ ಭೂಕುಸಿತ: ನಾಲ್ಕು ರಾಜ್ಯಗಳಿಗೆ ಸಂಪರ್ಕಿಸುವ ಏಕೈಕ ರಸ್ತೆ ಮಾರ್ಗ ಬಂದ್ - ಭೂ ಕುಸಿತ
Published : Feb 3, 2024, 2:18 PM IST
ಸಿಲ್ಚಾರ್: ಮೇಘಾಲಯದ ಗಡಿಗೆ ಹೊಂದಿಕೊಂಡಿರುವ ಸೋನಾಪುರದ ಸುತ್ತಮುತ್ತ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 6ರಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ. ಗುವಾಹಟಿ ಮತ್ತು ಸಿಲ್ಚಾರ್ ರಸ್ತೆ ಸಂಪರ್ಕವು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಜೀವನಾಡಿ ಎಂದೇ ಕರೆಸಿಕೊಳ್ಳುವ ಬರಾಕ್ ಕಣಿವೆ ಮಾರ್ಗವು ಈಶಾನ್ಯದ ನಾಲ್ಕು ರಾಜ್ಯಗಳಾದ ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ದಕ್ಷಿಣ ಅಸ್ಸೋಂ ಸಂಪರ್ಕಿಸುವ ಏಕೈಕ ರಸ್ತೆಯಾಗಿದೆ. ಮಳೆಯಿಂದ ಸೋನಾಪುರ ಸುರಂಗದ ಬಳಿ ಬಂಡೆಗಳು ಉರುಳಿ ರಸ್ತೆ ಮೇಲೆ ಬಿದ್ದಿದ್ದರಿಂದ ಶುಕ್ರವಾರ ತಡರಾತ್ರಿಯಿಂದ ಸಂಪರ್ಕ ಕಡಿತಗೊಂಡಿದೆ.
ರಸ್ತೆ ತಡೆಯಿಂದಾಗಿ ರಸ್ತೆಯ ಮೂಲಕ ಸಂಚರಿಸುವ ನೂರಾರು ವಾಹನಗಳು ಸುರಂಗದ ಎರಡೂ ಬದಿಯಲ್ಲಿ ಸಿಲುಕಿಕೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಕ್ಷಣಾ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಸಾವಿರಾರು ಚಾಲಕರು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ನಾಗರಿಕರ ಸಂಕಷ್ಟಕ್ಕೆ ಅಂತ್ಯ ಹಾಡಲು ಜಿಲ್ಲಾಡಳಿತವು ರಸ್ತೆಯನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಭಾರಿ ಪ್ರಮಾಣದಲ್ಲಿ ಭೂಮಿ ಕುಸಿತಗೊಂಡಿದ್ದರಿಂದ ರಸ್ತೆ ಮಾರ್ಗ ಸಹಜ ಸ್ಥಿತಿಗೆ ಮರಳಲು ಕೆಲವು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೆ ಜಿಲ್ಲಾಡಳಿತವು ಸದ್ಯ ಮಣ್ಣು ತೆರವುಗೊಳಿಸುವಲ್ಲಿ ನಿರತವಾಗಿದೆ.
ಇದನ್ನೂ ಓದಿ: ಹಿಮಾಚಲದಲ್ಲಿ ಭಾರಿ ಹಿಮಪಾತ: 700ಕ್ಕೂ ಹೆಚ್ಚು ರಸ್ತೆಗಳು ಬಂದ್