ಧೂಮಪಾನ ಮಾಡುವವರಿಗಿಂತ ಧೂಮಪಾನದ ಹೊಗೆ ಸೇವಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ದುಷ್ಪರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವುದು ಹಲವು ಸಂಶೋಧನೆಗಳಿದ ತಿಳಿದು ಬರುತ್ತಿದೆ. ಆದರೆ, ಇದನ್ನು ತಪ್ಪಿಸಲು ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಗೊಳಿಸಿದ್ದರೂ ಸಹ ಇನ್ನು ಕೂಡ ನಿಂತಿಲ್ಲ. ಅದಕ್ಕಾಗಿಯೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಯಂತ್ರಣಕ್ಕೆ 'ಸ್ಟಾಪ್ ಟೊಬ್ಯಾಕೋ' ಮೊಬೈಲ್ ಅಫ್ಲೀಕೇಶನ್ ಬಿಡುಗಡೆ ಮಾಡಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ತಡೆಯಲು ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಕೋಶವು ಜಿಪಿಎಸ್ ಆಧಾರಿತ ಮೊಬೈಲ್ ಅಪ್ಲಿಕೇಶನ್ "ಸ್ಟಾಪ್ ಟೊಬ್ಯಾಕೋ" ಬಿಡುಗಡೆ ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಧೂಮಪಾನ ಮಾಡುವುದು ಕಂಡುಬಂದರೆ, ಅವರ ಛಾಯಾಚಿತ್ರವನ್ನು ತೆಗೆದುಕೊಂಡು ಅದನ್ನು ಈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದಲ್ಲಿ, ತಂಬಾಕು ನಿಯಂತ್ರಣ ಕೋಶದ ತಂಡವು ಸ್ಥಳಕ್ಕೆ ಧಾವಿಸಿ, ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತದೆ.
ಆ್ಯಪ್ ಮೂಲಕ ದೂರು ಸಲ್ಲಿಸುವುದು ಹೇಗೆ?ಸಾರ್ವಜನಿಕರು ತಮ್ಮ ಮೊಬೈಲ್‌ನ ಪ್ಲೇ ಸ್ಟೋರ್ನಲ್ಲಿ stoptobacco ಎಂದು ಟೈಪ್ ಮಾಡಿ, ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆ್ಯಪ್ನಲ್ಲಿ ಕಾಣಿಸುವ ರಿಜಿಸ್ಟರ್ ಕಂಪ್ಲೆಂಟ್ ಎಂಬುದನ್ನು ಒತ್ತಿ, ಧೂಮಪಾನ ಮಾಡುತ್ತಿರುವ ವ್ಯಕ್ತಿಗಳು ಇರುವ ಸ್ಥಳದ ಫೋಟೋ ತೆಗೆದು, ತಮ್ಮ ಹೆಸರು, ಜಿಲ್ಲೆ ಮತ್ತು ಡ್ರಾಪ್ ಬಾಕ್ಸ್ನಲ್ಲಿರುವ ಯಾವ ರೀತಿಯ ದೂರು ಎಂಬುದನ್ನು ಆಯ್ಕೆ ಮಾಡಿಕೊಂಡು, ಧೂಮಪಾನ ಮಾಡುತ್ತಿರುವ ಸ್ಥಳದ ವಿಳಾಸ, ತಮ್ಮ ಮೊಬೈಲ್ ಸಂಖ್ಯೆ ಮತ್ತು ಸ್ಥಳದ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.
ತಕ್ಷಣವೇ ಕ್ರಮಕ್ಕೆ ಮುಂದಾಗುವ ಅಧಿಕಾರಿಗಳು:ಸಾರ್ವಜನಿಕರು ಸಲ್ಲಿಸಿದ ಈ ದೂರು, ಆ ಜಿಲ್ಲೆಯ ತಂಬಾಕು ನಿಯಂತ್ರಣ ಅಧಿಕಾರಿಯ ಮೊಬೈಲ್ನಲ್ಲಿನ ಆಪ್‌ಗೆ ರವಾನೆಯಾಗುತ್ತದೆ. ಅವರು ತಕ್ಷಣವೇ ಘಟನಾ ಸ್ಥಳ ಹತ್ತಿರದ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಯ ಮೊಬೈಲ್ಗೆ ಆಪ್ ಮೂಲಕವೇ ಈ ದೂರನ್ನು ಕಳುಹಿಸಿ, ಪರಿಶೀಲನೆ ಮಾಡಲು ಸೂಚಿಸುತ್ತಾರೆ. ದೂರು ಪರಿಶೀಲನೆಗೆ ಆಗಮಿಸುವ ತಂಡ ಸಂಬಂಧಪಟ್ಟ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗಳು ಧೂಮಪಾನ ಮಾಡುತ್ತಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಯಿಂದ ಮತ್ತು ಆ ಸ್ಥಳದಲ್ಲಿ ಧೂಮಪಾನ ಮಾಡಲು ಅವಕಾಶ ಮಾಡಿಕೊಟ್ಟ ಅಂಗಡಿಯ ಮಾಲೀಕನಿಂದಲೂ ನಿಗದಿತ ದಂಡ ವಸೂಲಿ ಮಾಡಲಿದ್ದಾರೆ.
ಆ್ಯಪ್ ಮೂಲಕ ನಡೆಯುವ ಈ ಎಲ್ಲಾ ಚಟುವಟಿಕೆಗಳ ಮಾಹಿತಿಯು ಜಿಲ್ಲಾ ಮಟ್ಟದಲ್ಲಿರುವ ಅಧಿಕಾರಿಗಳು ಮತ್ತು ಬೆಂಗಳೂರಲ್ಲಿರುವ ಅಧಿಕಾರಿಗಳ ಮೊಬೈಲ್ನಲ್ಲಿರುವ ಆ್ಯಪ್ಗೆ ಸಹ ರವಾನೆಯಾಗಲಿದೆ. ದೂರಿನ ಆರಂಭದಿಂದ ಮುಕ್ತಾಯದವರೆಗಿನ ಪ್ರತಿ ಹಂತದ ವಿವರಗಳನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಆ್ಯಪ್ನಲ್ಲಿಯೇ ದಾಖಲಿಸಬೇಕಿದೆ. ಪ್ರಕರಣ ಮುಕ್ತಾಯವಾದಲ್ಲಿ ಈ ಬಗ್ಗೆ ದೂರುದಾರರಿಗೆ ಸಹ ಮಾಹಿತಿ ರವಾನೆಯಾಗಲಿದೆ.
ಈ ಆ್ಯಪ್ ದೂರು ನೀಡಲು ಮಾತ್ರ ಬಳಕೆಯಾಗದೇ, ಕೋಪ್ಟಾ ಕಾಯ್ದೆಯ ನಿಯಮಗಳು, ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮತ್ತು ಬಳಕೆಯ ನಿಷೇಧ ಕುರಿತು ಚಿತ್ರಗಳ ಮಾಹಿತಿಯನ್ನೂ ಸಹ ನೀಡಲಿದೆ. stoptobacco ಆ್ಯಪ್‌ನ್ನು ಡೌನ್ ಲೋಡ್ ಮಾಡಿಕೊಳ್ಳಲು ಕ್ಯೂ.ಆರ್ ಕೋಡ್ ಕೂಡಾ ಇದ್ದು, ಸಾರ್ವಜನಿಕರ ಇದರ ಸೌಲಭ್ಯ ಪಡೆಯಬೇಕಾಗಿದೆ.
ಇದನ್ನೂ ಓದಿ: ನೀವು ಡೌನ್‌ಲೋಡ್ ಮಾಡುವ ಎಲ್ಲಾ ಅಪ್ಲಿಕೇಶನ್‌ಗಳು ಸುರಕ್ಷಿತವೇ?: ಅವುಗಳ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು! - Mobile App Safety Check