ಬೀಜಿಂಗ್: ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಚಂದ್ರನತ್ತ ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರನ ದೂರದ ಭಾಗದ ಮೇಲಿಳಿಯಲಿರುವ ಇದು ಚಂದ್ರನ ಮೇಲ್ಮೈಯಿಂದ ಕಲ್ಲು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರಲಿದೆ. ದಕ್ಷಿಣ ದ್ವೀಪ ಪ್ರಾಂತ್ಯದ ಹೈನಾನ್ ಕರಾವಳಿಯ ವೆನ್ ಚಾಂಗ್ ಬಾಹ್ಯಾಕಾಶ ಉಡಾವಣಾ ಸ್ಥಳದಿಂದ ಚಾಂಗ್'ಇ -6 ಬಾಹ್ಯಾಕಾಶ ನೌಕೆಯನ್ನು ಹೊತ್ತ ಲಾಂಗ್ ಮಾರ್ಚ್ -5 ರಾಕೆಟ್ ಶುಕ್ರವಾರ ಮಧ್ಯಾಹ್ನ ಉಡಾವಣೆಯಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದು ಚಂದ್ರನ ದೂರದ ಭಾಗಕ್ಕೆ ಚೀನಾದ ಚಾಂಗ್'ಇ -4 2019 ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿತ್ತು. ಆದರೆ ಈಗ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಇದೇ ಮೊದಲ ಬಾರಿಗೆ ಚಂದ್ರನ ದೂರದ ಪ್ರದೇಶದ ಮೇಲಿನಿಂದ ಧೂಳಿನ ಮಾದರಿಗಳನ್ನು ಸಂಗ್ರಹಿಸಲಿದೆ. ಚಂದ್ರನ ಮೇಲ್ಮೈಯಿಂದ 2 ಕೆಜಿ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವ ಗುರಿಯನ್ನು ನೌಕೆ ಹೊಂದಿದೆ. 2020 ರಲ್ಲಿ ಚಾಂಗ್'ಇ -5 ಸುಮಾರು ನಾಲ್ಕು ಪೌಂಡ್ ರೆಗೊಲಿತ್ ಅನ್ನು ಮರಳಿ ತಂದಿತ್ತು. ಆದರೆ ಅದು ಚಂದ್ರನ ಹತ್ತಿರದ ಭಾಗದಿಂದ ತಂದ ಮಾದರಿಯಾಗಿತ್ತು. ಯುಎಸ್ ಮತ್ತು ಮಾಜಿ ಸೋವಿಯತ್ ಒಕ್ಕೂಟ ಕೂಡ ಚಂದ್ರನ ಮೇಲಿಂದ ಮಾದರಿಗಳನ್ನು ಯಶಸ್ವಿಯಾಗಿ ಸಂಗ್ರಹಿಸಿ ಭೂಮಿಗೆ ಮರಳಿ ತಂದಿವೆ.
ಚಾಂಗ್'ಇ -6 ಬಾಹ್ಯಾಕಾಶ ನೌಕೆಯು ಆರ್ಬಿಟರ್, ಲ್ಯಾಂಡರ್, ಅಸೆಂಡರ್ ಮತ್ತು ರಿಟರ್ನರ್ ಗಳನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಸಹಕಾರದ ಮೂಲಕ ಅಭಿವೃದ್ಧಿಪಡಿಸಿದ ನಾಲ್ಕು ಪೇಲೋಡ್ಗಳನ್ನು ಸಹ ಈ ನೌಕೆ ಹೊತ್ತೊಯ್ದಿದೆ. ಫ್ರಾನ್ಸ್, ಇಟಲಿ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ವೈಜ್ಞಾನಿಕ ಉಪಕರಣಗಳು ಚಾಂಗ್'ಇ -6 ಲ್ಯಾಂಡರ್ನಲ್ಲಿದ್ದರೆ, ಪಾಕಿಸ್ತಾನದ ಸಣ್ಣ ಉಪಗ್ರಹವೊಂದು ಆರ್ಬಿಟರ್ನಲ್ಲಿದೆ.