ಮೈಸೂರು: ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನವನ್ನು ಗೆದ್ದಿಲ್ಲ ನಿಜ. ಆದರೆ ಮೈತ್ರಿ ಪಕ್ಷಗಳೊಂದಿಗೆ ಸೇರಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಗೆಲುವಿನ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿರುವುದು ನನ್ನ ಗೆಲುವಲ್ಲ, ಮೈತ್ರಿ ಪಕ್ಷದ ಗೆಲುವು. ತಾಯಿ ಚಾಮುಂಡೇಶ್ವರಿ ಹಾಗೂ ಕಾವೇರಮ್ಮನ ಆರ್ಶೀವಾದದಿಂದ ಗೆದ್ದಿದ್ದೇನೆ. ಮೈಸೂರಿನಲ್ಲಿ ಕಾಂಗ್ರೆಸ್ ಹಾಗೂ ಸ್ವತಃ ಮುಖ್ಯಮಂತ್ರಿಗಳೇ ಕಠಿಣ ಸವಾಲೊಡ್ಡಿದ್ದರು. ಅದನ್ನು ಎದುರಿಸಿ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆ ಹೊಂದಾಣಿಕೆಯಿಂದ ಸರ್ಕಾರ ರಚಿಸುತ್ತೇವೆ ಎಂದು ಯದುವೀರ್ ಒಡೆಯರ್ ಹೇಳಿದರು.
ಮೈಸೂರು-ಕೊಡಗಿನ ಜನ ಜಾತಿ-ಧರ್ಮ ನೋಡದೇ ಭಾರತೀಯರು ಎಂಬ ಮನೋಭಾವದಿಂದ ಮತ ಹಾಕಿದ್ದಾರೆ. ಚುನಾವಣೆಯಲ್ಲಿ ಎಲ್ಲೂ ಜಾತಿ-ಧರ್ಮ ಬಳಸಿಲ್ಲ. ನಿರೀಕ್ಷೆಯಂತೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಸಹಾಯದಿಂದ ಗೆಲುವು ಸಾಧಿಸಿದ್ದೇವೆ ಎಂದರು.
ಎಲ್ಲರ ಸಹಕಾರದಿಂದ ಮಗ ಗೆದ್ದಿದ್ದಾನೆ-ಪ್ರಮೋದಾ ದೇವಿ ಒಡೆಯರ್: ಎಲ್ಲರ ಸಹಕಾರ ಮತ್ತು ಶ್ರಮದಿಂದ ನನ್ನ ಮಗ ಗೆದ್ದಿದ್ದಾನೆ. ಮುಂದೆ ಒಳ್ಳೆಯ ಕೆಲಸ ಮಾಡುತ್ತಾನೆ ಎಂಬ ನಂಬಿಕೆಯಿದೆ. ಅರಮನೆಗೆ ಅಧಿಕಾರ ಹೊಸದಲ್ಲ, ಹಿಂದೆಯೂ ನಮ್ಮ ಮನೆಯವರು ಎಂಪಿಯಾಗಿದ್ದರು. ನಂತರ ಸ್ಪಲ್ಪ ಗ್ಯಾಪ್ ಆಯಿತು. ಈಗ ಮತ್ತೆ ಅಧಿಕಾರ ಬಂದಿದೆ. ಆಗ ಅಧಿಕಾರದಲ್ಲಿದ್ದಾಗ ನಾನು ಅದನ್ನು ನೋಡಿಕೊಳ್ಳುತ್ತಿದ್ದೆ. ಈಗ ಮಗನಿಗೆ ಮಾರ್ಗದರ್ಶನ ನೀಡುತ್ತೇನೆ ಎಂದು ಪ್ರಮೋದe ದೇವಿ ಒಡೆಯರ್ ಹೇಳಿದರು.