ಬೆಂಗಳೂರು:ಪ್ರತಿ ವರ್ಷದಂತೆ ಈ ಸಲವೂ ವಿವಾಹ ವಾರ್ಷಿಕೋತ್ಸವಕ್ಕೆ ಉಡುಗೊರೆ ಕೊಡಲಿಲ್ಲ ಎಂಬ ಕಾರಣಕ್ಕೆ ಮಲಗಿದ್ದ ಪತಿಗೆ ಆತನ ಪತ್ನಿ ಚಾಕುವಿನಿಂದ ಇರಿದ ಘಟನೆ ಫೆಬ್ರವರಿ 27ರ ರಾತ್ರಿ ಬೆಳ್ಳಂದೂರಿನ ಜುನ್ನಸಂದ್ರದಲ್ಲಿ ನಡೆದಿದೆ. 37 ವರ್ಷದ ಗಾಯಾಳು ಪತಿಯ ಹೇಳಿಕೆ ಆಧರಿಸಿ, ಆತನ 35 ವರ್ಷ ವಯಸ್ಸಿನ ಪತ್ನಿಯ ವಿರುದ್ಧ ಬೆಳ್ಳಂದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ವ್ಯಕ್ತಿಯು ಜುನ್ನಸಂದ್ರದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದರು. 'ಪ್ರತಿ ವರ್ಷ ವಿವಾಹ ವಾರ್ಷಿಕೋತ್ಸವದ ದಿನ ಪತ್ನಿಗೆ ಏನಾದರೂ ಗಿಫ್ಟ್ ನೀಡುತ್ತಿದ್ದೆ. ಆದರೆ, ಈ ವರ್ಷ ನನ್ನ ತಾತ ನಿಧನರಾಗಿದ್ದರಿಂದ ಹಿಂದಿನ ದಿನ ಗಿಫ್ಟ್ ಖರೀದಿಸಲು ಸಾಧ್ಯವಾಗಿರಲಿಲ್ಲ. ಅದೇ ಕೋಪದಲ್ಲಿದ್ದ ಪತ್ನಿ, ನಾನು ನಿದ್ದೆಗೆ ಜಾರಿದ್ದ ಸಮಯದಲ್ಲಿ ರಾತ್ರಿ 1:30ರ ಸುಮಾರಿಗೆ ಚಾಕುವಿನಿಂದ ಇರಿದಿದ್ದಾಳೆ' ಎಂದು ಪತಿ ಪೊಲೀಸರೆದುರು ಹೇಳಿಕೆ ನೀಡಿದ್ದಾರೆ.