ಕರ್ನಾಟಕ

karnataka

ETV Bharat / state

ನಕ್ಸಲರು ಸಿಎಂ ಕಚೇರಿಗೆ ಬಂದು ಶರಣಾಗುವುದರಲ್ಲಿ ತಪ್ಪೇನಿದೆ : ಗೃಹ ಸಚಿವ ಪರಮೇಶ್ವರ್ - NAXALS SURRENDER

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಶೇ.99ರಷ್ಟು ಕೊನೆಯಾಗಿದೆ‌. ಶರಣಾಗತರಾದ ನಕ್ಸಲರಲ್ಲಿ ತಮಿಳುನಾಡು, ಕೇರಳ ರಾಜ್ಯದವರು ಇದ್ದಾರೆ. ನಮ್ಮ‌ ಮುಖ್ಯಮಂತ್ರಿಯವರು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್ (ETVBharat)

By ETV Bharat Karnataka Team

Published : 18 hours ago

ಬೆಂಗಳೂರು:ನಕ್ಸಲರು ಮುಖ್ಯಮಂತ್ರಿಯವರ ಕಚೇರಿಗೆ ಬಂದು ಶರಣಾಗತರಾಗಿರುವುದರಲ್ಲಿ‌ ತಪ್ಪೇನಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ಚಟುವಟಿಕೆಗೆ ಬರಬಾರದು‌ ಎಂಬ ಸಂದೇಶ ಇಡೀ ಸಮಾಜಕ್ಕೆ ತಲುಪಬೇಕು. ಮುಖ್ಯಮಂತ್ರಿಯವರ ಮುಂದೆ ಶರಣಾದಾಗ ರಾಜ್ಯದಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ. ನಕ್ಸಲರ‌ ಪರಿವರ್ತನೆಗೆ ಸರ್ಕಾರ ಅವಕಾಶ ಕೊಟ್ಟಿದೆ. ಅದರಲ್ಲಿ ತಪ್ಪೇನಿದೆ‌?. ಬಿಜೆಪಿ ಶಾಸಕ‌ ಸುನೀಲ್ ಕುಮಾರ್​ ಕ್ಷೇತ್ರದಲ್ಲಿ ನಕ್ಸಲ್ ಚಟುವಟಿಕೆ ಜಾಸ್ತಿ ಇದೆ. ಎಎನ್ಎಫ್ ಕಾರ್ಕಳದಲ್ಲಿ ಇದೆಯಲ್ಲವೇ ಎಂದು ಪ್ರಶ್ನಿಸಿದರು.

ನಕ್ಸಲರು ಶರಣಾದಾಗ ಶಸ್ತ್ರಾಸ್ತ್ರಗಳು ಇರಲಿಲ್ಲ. ಶಸ್ತ್ರಾಸ್ತ್ರಗಳನ್ನು ಬಿಟ್ಟು ಬಂದಿದ್ದಾರೆ. ಎಲ್ಲಿ ಎಸೆದು ಬಂದಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಶೇ.99ರಷ್ಟು ಕೊನೆಯಾಗಿದೆ‌. ಶರಣಾಗತರಾದ ನಕ್ಸಲರಲ್ಲಿ ತಮಿಳುನಾಡು, ಕೇರಳ ರಾಜ್ಯದವರು ಇದ್ದಾರೆ. ನಮ್ಮ‌ ಮುಖ್ಯಮಂತ್ರಿಯವರು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಶರಣಾದ ನಕ್ಸಲರ ಮೇಲೆ ಬೇರೆ ರಾಜ್ಯಗಳಲ್ಲಿ ಪ್ರಕರಣಗಳಿವೆ. ಆ ರಾಜ್ಯದ ಸರ್ಕಾರಗಳು ಸಹ ತೀರ್ಮಾನ ಕೈಗೊಳ್ಳಬೇಕು ಎಂದರು.

ಗೃಹ ಸಚಿವ ಪರಮೇಶ್ವರ್ (ETV Bharat)

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಜೆಂಡ ಏನಿದೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಎಸ್‌ಸಿ, ಎಸ್‌ಟಿ ಸಮಾವೇಶದ ಕುರಿತು‌ ಕರೆದಿದ್ದ ಸಭೆ ಮುಂದೂಡಲು ಅನೇಕ ಕಾರಣಗಳಿವೆ. ಎಐಸಿಸಿ ವರಿಷ್ಠರು ಭಾಗವಹಿಸುವುದಾಗಿ ತಿಳಿಸಿದ್ದರಿಂದ ಮುಂದೂಡಲಾಗಿದೆ. ಎಐಸಿಸಿ ನಮ್ಮ ಮೇಲೆ ನಂಬಿಕೆ ಇಟ್ಟಿಲ್ಲ ಎಂಬ ಪ್ರಶ್ನೆ ಈಗ ಬರುವುದಿಲ್ಲ ಎಂದು ಹೇಳಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರು ನನ್ನ ಜೊತೆ ಮಾತನಾಡಿದ್ದಾರೆ. ಗೌಪ್ಯ ಸಭೆ ಏನೂ ಇಲ್ಲ. ನಮ್ಮ ಸಮಸ್ಯೆಗಳನ್ನು ಚರ್ಚಿಸಬೇಕು ಅಂತ ಸಭೆ ಸೇರುತ್ತಿದ್ದೇವೆ. ಅದಕ್ಕೆ ಅವರಿಗೆ ಬನ್ನಿ ಎಂದು ಕರೆದಿದ್ದೇನೆ. ಅವರು ದಿನಾಂಕ ಸೂಚಿಸುವುದಾಗಿ ತಿಳಿಸಿದ್ದಾರೆ. ನಂತರ ಸಭೆ ಮಾಡುತ್ತೇವೆ ಎಂದರು.

ಯಾರು ಆತಂಕ ಪಡುವ ಅಗತ್ಯತೆ ಇಲ್ಲ. ಪಕ್ಷದಿಂದ ಹೊರತಾಗಿ ಸಮಾವೇಶ ಮಾಡುತ್ತೇವೆ ಎಂದು ನಾನು ಎಲ್ಲೂ ಹೇಳಿಲ್ಲ. ನಾನಾ ವಿಶ್ಲೇಷಣೆಗಳಿಗೆ ಉತ್ತರಿಸಲು ಆಗುತ್ತದೆಯೇ?. ಒಬ್ಬೊಬ್ಬರು ಒಂದೊಂದು ರೀತಿಯ ವಿಶ್ಲೇಷಣೆ ಮಾಡುವುದು ಸಹಜ. ಡಿ.ಕೆ.ಶಿವಕುಮಾರ್ ಅವರು ನನಗೆ ಆತಂಕವಿದೆ ಎಂದು ಎಲ್ಲಾದರು ಹೇಳಿದ್ದಾರೆಯೇ?. ಸುಮ್ಮನೆ ಹೇಳುವುದು ಬೇಡ. ನಿನ್ನೆ ಇಡೀ ದಿನ ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಪತ್ರಿಕಾಗೋಷ್ಟಿಯನ್ನು ನಡೆಸಿದ್ದೇವೆ. ನನಗೆ ನಿಮ್ಮ ಆತಂಕ ಇದೆ ಅಂತ ಅವರು ಹೇಳೇ ಇಲ್ಲ ಎಂದು ಪ್ರತಿಕ್ರಿಯಿಸಿದರು.

ತಿರುಪತಿಯಲ್ಲಿ ಕಾಲ್ತುಳಿತದಿಂದ ಭಕ್ತರು ಸಾವನ್ನಪ್ಪಿರುವುದು ದುರದೃಷ್ಟಕರ. ಈ ರೀತಿ ಆಗಬಾರದಿತ್ತು. ಮೃತರ ಕುಟುಂಬದವರಿಗೆ ಭಗವಂತನು ದುಃಖ ಭರಿಸುವ ಶಕ್ತಿ ಕರುಣಿಸಲಿ. ಈವರೆಗಿನ ಮಾಹಿತಿ ಪ್ರಕಾರ, ಘಟನೆಯಲ್ಲಿ ರಾಜ್ಯದವರು ಇದ್ದರು ಎಂಬುದು ಗೊತ್ತಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿದ ನಕ್ಸಲರು; ಕೊಟ್ಟ ಭರವಸೆ ಈಡೇರಿಸುವುದಾಗಿ ಸಿಎಂ ಅಭಯ

ಇದನ್ನೂ ಓದಿ:'ಹುಟ್ಟೂರಿನಲ್ಲಿ ನಾನು ಓದಿದ ಕಿರಿಯ ಪ್ರಾಥಮಿಕ ಶಾಲೆಗೆ ಪುನರ್ವಸತಿ ಪ್ಯಾಕೇಜ್​ನ ಅರ್ಧ ಹಣ ನೀಡಲಿ': ಮುಖ್ಯವಾಹಿನಿಗೆ ಬರಲು ಸಿದ್ಧರಾದ ನಕ್ಸಲರು

ABOUT THE AUTHOR

...view details