ಬೆಳಗಾವಿ:ಮುಂಗಾರು, ಹಿಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಇದರ ನಡುವೆ ಯಮಕನಮರಡಿ ವ್ಯಾಪ್ತಿಗೆ ಬರುವ ಏಳು ಹಳ್ಳಿಗಳ ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕ್ಷೇತ್ರದಲ್ಲಿ ಏಳು ಹಳ್ಳಿಗಳ ಜನರು ಒಂದೇ ಬಾವಿ ಆಶ್ರಯಿಸಿದ್ದು, ಮಹಿಳೆಯರು, ಮಕ್ಕಳು ಕಿಮೀಗಟ್ಟಲೇ ನಡೆದುಕೊಂಡು ಬಂದು ಇಲ್ಲಿಂದ ಹೊತ್ತೊಯ್ಯುತ್ತಾರೆ.
7 ಗ್ರಾಮಗಳ ದಾಹ ನೀಗಿಸುವ ಬಾವಿ:ಅನೇಕ ಹಳ್ಳಿಗಳಲ್ಲಿ ನಲ್ಲಿಗಳು, ಬೋರ್ ವೆಲ್ಗಳಿಂದ ಜನರಿಗೆ ನೀರಿನ ಸೌಕರ್ಯ ಒದಗಿಸುವುದನ್ನು ಸಹಜ. ಆದರೆ, ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಹೊಸ ವಂಟಮೂರಿ, ಮಲ್ಲಹೊಳಿ, ಜಾರಕಿಹೊಳಿ, ಪರ್ಲಗೋಟ ಸೇರಿ ಏಳು ಊರುಗಳ ಜನ ನೀರು ಕುಡಿಯಲು ಮತ್ತು ಬಳಸಲು ಇರುವ ಒಂದೇ ಬಾವಿ ಆಶ್ರಯಿಸಿದ್ದಾರೆ. ನೀರು ಹೊತ್ತುಕೊಂಡು ಹೋಗಲು ಸರಿಯಾದ ರಸ್ತೆ ಕೂಡ ಇಲ್ಲ. ಕಲ್ಲು, ಮುಳ್ಳುಗಳ ಹಾದಿಯಲ್ಲಿ ಗರ್ಭಿಣಿಯರು, ವೃದ್ಧೆಯರು, ಚಿಕ್ಕಮಕ್ಕಳು ನೀರಿಗಾಗಿ ನಿತ್ಯ ಜೀವವನ್ನೇ ಪಣಕ್ಕಿಡುವ ಸ್ಥಿತಿಯಿದೆ.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರಕ್ಕೆ ಒಳಪಡುವ ಈ 7 ಗ್ರಾಮಗಳ ಜನರು ಕಳೆದ ಅನೇಕ ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಜಲ್ ಜೀವನ್ ಮಿಷನ್ ಯೋಜನೆಯಡಿ ಅನೇಕ ಊರುಗಳಲ್ಲಿ ಮನೆ ಮನೆಗೂ ನಲ್ಲಿಗಳನ್ನು ಜೋಡಿಸಿ, ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲೂ ಕೂಡ ಆ ಯೋಜನೆಯಡಿ ಒಂದಿಷ್ಟು ಮನೆಗಳಿಗೆ ನಲ್ಲಿಗಳನ್ನು ಜೋಡಿಸಿ ನಾಲ್ಕೈದು ತಿಂಗಳಾಗಿದೆ. ಆದರೆ, ನೀರು ಮಾತ್ರ ಬಂದಿಲ್ಲ. ಜೆಜೆಎಂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ.
ಈ ಟಿವಿ ಭಾರತ ಜೊತೆಗೆ ಮಾತನಾಡಿದ ಹೊಸ ವಂಟಮೂರಿ ಮಹಿಳೆ ನಿಂಗವ್ವ ವಣ್ಣೂರೆ, ನೀರು ತೆಗೆದುಕೊಂಡು ಹೋಗುವಾಗ ಕಲ್ಲು, ಮುಳ್ಳು ತುಳಿದು ಬಿದ್ದು ಗಾಯಗೊಂಡರೂ ನಮ್ಮನ್ನು ಯಾರೂ ಕೇಳುವವರಿಲ್ಲ. ಇಲ್ಲಿನ ಶಾಸಕರ ಪಿಎ ಕರೆಸಿ, ತೋರಿಸಿದರೂ ಉಪಯೋಗ ಆಗಿಲ್ಲ. ನಮಗೆ ನೀರು ಕೊಟ್ಟು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನೀರಿನ ಸಮಸ್ಯೆ: ಹೆಚ್ಚು ನೀರು ಬಳಸಿದರೆ ದಂಡ ವಿಧಿಸಲು ಮುಂದಾದ ಅಪಾರ್ಟ್‌ಮೆಂಟ್ ಕ್ಷೇಮಾಭಿವೃದ್ಧಿ ಸಂಘಗಳು