ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ, ಜಲಾಶಯಗಳು, ಹಳ್ಳಕೊಳ್ಳ ಭರ್ತಿಯಾಗಿ ಹೊಲಗದ್ದೆಗಳು ಜಲಾವೃತಗೊಂಡಿವೆ. ರಸ್ತೆಗಳು ನದಿಯಂತಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹಪೀಡಿತ ಪ್ರದೇಶಗಳಲ್ಲಿದ್ದ ಜನರನ್ನು ಎಸ್‌ಡಿಆರ್‌ಎಫ್ ತಂಡದವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಹಲವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ವರುಣನ ಆರ್ಭಟ ಮುಂದುವರೆದಿದೆ.
ಭಾರಿ ಮಳೆ ಬೀಳುವ ನಿರೀಕ್ಷೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ ಗಡಿಭಾಗದ ಬೆಳಗಾವಿ, ಚಿಕ್ಕೋಡಿಯ ಹಲವು ಪ್ರದೇಶಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೃಷ್ಣಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಚಿಕ್ಕೋಡಿ ಭಾಗದ ಹಲವು ಸೇತುವೆಗಳು ಜಲಾವೃತಗೊಂಡಿದ್ದು, ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ದೂಧ್‌ಗಂಗಾ, ವೇದ್‌ಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ.
ಮಲೆನಾಡು, ಕರಾವಳಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಯ ಕಾವೇರಿ ನದಿ ನೀರಿನ ಮಟ್ಟ ನಿನ್ನೆ 103 ಅಡಿ ತಲುಪಿದ್ದು, ನಾಲೆಗಳಿಗೆ ನೀರು ಬಿಡಲು ಸಿದ್ಧತೆ ನಡೆಯುತ್ತಿದೆ. ಕಳೆದ ಹಲವು ದಿನಗಳಿಂದ ಮಡಿಕೇರಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೃಷ್ಣರಾಜಸಾಗರ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ನೀರಿನ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳ ಪೈಕಿ ಒಂದಾದ ಹಾರಂಗಿ ಭರ್ತಿ ಆಗಲು ಇನ್ನು 10 ಅಡಿಯಷ್ಟೇ ಬಾಕಿ ಇದೆ. ಸಾಮಾನ್ಯವಾಗಿ ಜೂನ್ ಅಂತ್ಯಕ್ಕೆ ಈ ಮಟ್ಟವನ್ನು ತಲುಪುತ್ತಿದ್ದ ನೀರು ಈ ವರ್ಷ ಜುಲೈ ಮೊದಲ ವಾರದಲ್ಲಿ ಗುರಿ ಮುಟ್ಟಿದೆ.
ರಾಜ್ಯದ 14 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಈ ಕೆಳಕಂಡಂತಿದೆ:
ಜಲಾಶಯಗಳ ನೀರಿನ ಮಟ್ಟ (ETV Bharat) - ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ (ಮೀ) 519.60, ಒಟ್ಟು ಸಾಮರ್ಥ್ಯ (ಟಿಎಂಸಿ) 123.08, ಇಂದಿನ ನೀರಿನ ಮಟ್ಟ (ಟಿಎಂಸಿ) 64.59.
- ತುಂಗಾಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ (ಮೀ) 497.71, ಒಟ್ಟು ಸಾಮರ್ಥ್ಯ (ಟಿಎಂಸಿ) 105.79, ಇಂದಿನ ನೀರಿನ ಮಟ್ಟ (ಟಿಎಂಸಿ) 20.85.
- ಮಲಪ್ರಭಾ ಜಲಾಶಯ - ಗರಿಷ್ಠ 633.80, ಸಾಮರ್ಥ್ಯ 37.73, ಇಂದಿನ ನೀರಿನ ಮಟ್ಟ 10.21.
- ಕೆ.ಆರ್.ಎಸ್ - ಗರಿಷ್ಠ 38.04, ಸಾಮರ್ಥ್ಯ 49.45, ಇಂದಿನ ಮಟ್ಟ 25.09.
- ಲಿಂಗನಮಕ್ಕಿ ಜಲಾಶಯ- ಗರಿಷ್ಠ 554.44, ಸಾಮರ್ಥ್ಯ 151.75, ಇಂದಿನ ಮಟ್ಟ 38.82.
- ಕಬಿನಿ ಜಲಾಶಯ- ಗರಿಷ್ಠ 696.13, ಸಾಮರ್ಥ್ಯ 19.52, ಇಂದಿನ ಮಟ್ಟ 18.17.
- ಭದ್ರಾ ಜಲಾಶಯ- ಗರಿಷ್ಠ 657.73, ಸಾಮರ್ಥ್ಯ 71.54, ಇಂದಿನ ಮಟ್ಟ 22.43.
- ಘಟಪ್ರಭಾ ಜಲಾಶಯ- ಗರಿಷ್ಠ 662.91, ಸಾಮರ್ಥ್ಯ 51.00, ಇಂದಿನ ಮಟ್ಟ 18.89.
- ಹೇಮಾವತಿ ಜಲಾಶಯ- ಗರಿಷ್ಠ 890.58, ಸಾಮರ್ಥ್ಯ 37.10, ಇಂದಿನ ಮಟ್ಟ 18.30.
- ವರಾಹಿ ಜಲಾಶಯ- ಗರಿಷ್ಠ 594.36, ಸಾಮರ್ಥ್ಯ 31.10, ಇಂದಿನ ಮಟ್ಟ 6.15.
- ಹಾರಂಗಿ ಜಲಾಶಯ- ಗರಿಷ್ಠ 871.38, ಸಾಮರ್ಥ್ಯ 8.50, ಇಂದಿನ ಮಟ್ಟ 5.64.
- ಸೂಫಾ-ಗರಿಷ್ಠ 564.00, ಸಾಮರ್ಥ್ಯ 145.33, ಇಂದಿನ ಮಟ್ಟ 43.63.
- ನಾರಾಯಣಪುರ ಜಲಾಶಯ- ಗರಿಷ್ಠ 492.25, ಸಾಮರ್ಥ್ಯ 33.31, ಇಂದಿನ ಮಟ್ಟ 21.16.
- ವಾಣಿ ವಿಲಾಸ ಸಾಗರ- ಗರಿಷ್ಠ 652.24, ಸಾಮರ್ಥ್ಯ 30.42, ಇಂದಿನ ನೀರಿನ ಮಟ್ಟ 18.07.
ಇದನ್ನೂ ಓದಿ:ಮಳೆರಾಯನ ಕೃಪೆಯಿಂದ ಬೆಳಗಾವಿಯ ಸಪ್ತನದಿಗಳಲ್ಲಿ ಜೀವಕಳೆ: ಅರ್ಧ ಭರ್ತಿಯತ್ತ ಹಿಡಕಲ್ ಡ್ಯಾಂ - Belagavi Rain Report