ಮಂಗಳೂರು:ಬಿಸಿಲ ಬೇಗೆ ಹೆಚ್ಚಾಗುತ್ತಿರುವಂತೆಯೇ ದ.ಕ. ಜಿಲ್ಲಾದ್ಯಂತ ನದಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹದ ಪ್ರಮಾಣವೂ ಇಳಿಕೆ ಆಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ದಿನೇ ದಿನೆ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಬಿಸಿಲಿನಿಂದ ಆವಿಯ ಪ್ರಮಾಣವೂ ಹೆಚ್ಚಾಗುತ್ತಿದೆ.
ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಕಳೆದ ವಾರದವರೆಗೂ ಮಾರ್ಚ್ ಪ್ರಥಮ ವಾರದಲ್ಲಿ 6 ಮೀಟರ್‌ವರೆಗೆ ನೀರು ಸಂಗ್ರಹವಿತ್ತು. ಬಳಿಕ ಇಂಚಿಂಚೂ ಕಡಿಮೆಯಾಗುತ್ತಿದೆ. ಕಳೆದ ಶನಿವಾರ 5.88 ಮೀಟರ್‌ಗೆ ಇಳಿಕೆಯಾಗಿದ್ದರೆ, ಈ ಶನಿವಾರ 5.66 ಮೀಟರ್‌ಗೆ ಇಳಿದಿದೆ. ತುಂಬೆ ಅಣೆಕಟ್ಟಿನ ಎಲ್ಲ ಗೇಟ್‌ಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಕೆಳ ಭಾಗದಿಂದ ಪಂಪ್ ಮೂಲಕ ನೀರನ್ನು ಮೇಲ್ಭಾಗಕ್ಕೆ ಹರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸದ್ಯ ನಗರ ಸೇರಿದಂತೆ ದ.ಕ. ಜಿಲ್ಲಾದ್ಯಂತ ಕುಡಿಯುವ ನೀರಿಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ.
ಮಾರ್ಚ್ ತಿಂಗಳಲ್ಲಿ ಬಹುತೇಕವಾಗಿ ಬಜ್ಪೆ, ಕೋಟೆಕಾರು, ಉಳ್ಳಾಲದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಸಹಜವಾಗಿದ್ದು, ಸಮಸ್ಯೆ ಇರುವಲ್ಲಿ ಪ್ರಸಕ್ತ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಈಗಾಗಲೇ ತಿಳಿಸಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ಗ್ರಾಮಾಂತರ ಹಾಗೂ ನಗರ ಭಾಗಗಳಲ್ಲಿ ಸದ್ಯ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ನದಿ, ತೊರೆ, ಹಳ್ಳ ಕೊಳ್ಳಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಜೀವ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿರುವಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದೆ. ಸುಳ್ಯದ ಜೀವನದಿ ಪಯಸ್ವಿನಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆಯಾದರೂ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹವಿದೆ. ಬೆಳ್ತಂಗಡಿಯಲ್ಲಿಯೂ ನಗರ ಪ್ರದೇಶಗಳಿಗೆ ನೀರು ಪೂರೈಕೆಯಾಗುವ ಚೆಕ್‌ಡ್ಯಾಮ್‌ಗಳಲ್ಲಿ ನೀರು ಸಂಗ್ರಹವಿದೆ. ಆದರೆ, ನದಿಯಲ್ಲಿ ನೀರಿನ ಪ್ರಮಾಣ ಮಾತ್ರ ಇಳಿಕೆಯಾಗಿದೆ. ಪುತ್ತೂರು ಹಾಗೂ ಬಂಟ್ವಾಳ ಭಾಗದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ.