ವರದಿ: ಸಿದ್ದನಗೌಡ ಪಾಟೀಲ್
ಬೆಳಗಾವಿ :ಕುಂದಾನಗರಿ ಬೆಳಗಾವಿಯಲ್ಲಿ ಹಸಿ ಕಸ - ಒಣ ಕಸ ಬೇರ್ಪಡಿಸುವಿಕೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಮಹಾನಗರ ಪಾಲಿಕೆ ಯಶಸ್ವಿಯಾಗಿದೆ. ಇದರಿಂದ ಪಾಲಿಕೆಗೆ ಪ್ರತಿ ತಿಂಗಳು 10 ಲಕ್ಷ ರೂ. ಹಣ ಉಳಿಕೆಯಾಗಿದೆ. ಕಸ ವಿಲೇವಾರಿ ಪ್ರಕ್ರಿಯೆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಬೆಳಗಾವಿ ನಗರದಲ್ಲಿ ಕಸ ನಿರ್ವಹಣೆ ದೊಡ್ಡ ಸವಾಲಾಗಿತ್ತು. ಮನೆ ಮನೆಗಳಿಂದ ಕಸ ಸಂಗ್ರಹಿಸುವ ವೇಳೆ ಜನರು ಹಸಿ ಕಸ-ಒಣ ಕಸ ಬೇರ್ಪಡಿಸಿ ನೀಡದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಹರಸಾಹಸ ಪಡುತ್ತಿದ್ದರು. ಆದರೆ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಶುಭ ಬಿ. ಅವರು ಬಂದ ಬಳಿಕ ನಗರದಲ್ಲಿ ಕಟ್ಟು ನಿಟ್ಟಾಗಿ ಹಸಿ ಮತ್ತು ಒಣ ಕಸ ಬೇರ್ಪಡಿಕೆ ಶುರುವಾಯಿತು. ಆರಂಭದಲ್ಲಿ ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೌರ ಕಾರ್ಮಿಕರ ಜೊತೆಗೆ ಕೆಲ ಜನರು ವಾಗ್ವಾದ ಕೂಡ ಮಾಡಿದ್ದರು. ನಂತರದ ದಿನಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿದ್ದು ಈಗ ಶೇ.80ರಷ್ಟು ಹಸಿ ಮತ್ತು ಒಣ ಕಸವನ್ನು ತಾವೇ ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡುತ್ತಿದ್ದಾರೆ.
66 ಎಕರೆಯಲ್ಲಿ ಕಸ ವಿಲೇವಾರಿ ಘಟಕ: ಬೆಳಗಾವಿ ತಾಲೂಕಿನ ತುರಮುರಿ ಗ್ರಾಮದ ಬಳಿಯ 66 ಎಕರೆ ಪ್ರದೇಶದಲ್ಲಿ 2009ರಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ನಗರದ ವಿವಿಧೆಡೆ ಮತ್ತು ಕೆಲವು ಗ್ರಾಮಗಳಿಂದ ಸಂಗ್ರಹಿಸುವ ಕಸವನ್ನು ಇಲ್ಲಿಯೇ ಸಂಸ್ಕರಿಸಲಾಗುತ್ತದೆ. ನಿತ್ಯ 120 ಟನ್ ಹಸಿ ಕಸ, 90 ಟನ್ ಒಣ ಕಸ ಶೇಖರಣೆಯಾಗುತ್ತಿದೆ. ಕಸ ಸಂಸ್ಕರಣೆ ಮಾಡಲು ತೆಲಂಗಾಣ ಮೂಲದ ರಾಮಕೀ ಕಂಪನಿಗೆ 2009 ರಿಂದ 2029ವರೆಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಅವಧಿ ಪೂರ್ಣಗೊಂಡ ಬಳಿಕ ಎಲ್ಲ ಯಂತ್ರಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆಯೂ ಒಪ್ಪಂದವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕಸವನ್ನು ಸಂಸ್ಕರಣೆ ಮಾಡಿದ ಬಳಿಕ ಉಳಿಯುವ ನಿರುಪಯುಕ್ತ (ಇನ್ನರ್ಟ್) ತ್ಯಾಜ್ಯದ ಆಧಾರದ ಮೇಲೆ ರಾಮಕೀ ಅವರಿಗೆ ಹಣ ಪಾವತಿಸಲಾಗುತ್ತಿದೆ. ಪ್ರತಿ ಟನ್ಗೆ 1250 ರೂ. ನಿಗದಿ ಪಡಿಸಲಾಗಿದೆ. ಪ್ರತಿ ತಿಂಗಳು ಸುಮಾರು 38-40 ಲಕ್ಷ ರೂ. ಹಣ ಪಾವತಿಸಲಾಗುತ್ತಿತ್ತು. ಆದರೆ, ಈಗ ಶೇ.80ರಷ್ಟು ಹಸಿ ಮತ್ತು ಒಣ ಕಸ ಬೇರ್ಪಡಿಸುತ್ತಿರುವುದರಿಂದ ಇನ್ನರ್ಟ್ ಪ್ರಮಾಣ ಕಡಿಮೆಯಾಗಿ, ಅವರಿಗೆ ಪಾವತಿಸುವ ಮೊತ್ತವು 28-30 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಪ್ರತಿ ತಿಂಗಳು 8-10 ಲಕ್ಷ ರೂ. ಪಾಲಿಕೆಗೆ ಉಳಿತಾಯವಾಗಿದೆ.
ಕಸ ಸಂಸ್ಕರಣೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?ಮನೆ ಮನೆಗಳಿಂದ ಸಂಗ್ರಹಿಸಿದ ಕಸವನ್ನು ತುಂಬಿಕೊಂಡು ಬರುವ ಪಾಲಿಕೆ ವಾಹನಗಳನ್ನು ಮೊದಲಿಗೆ ತೂಕದ ಪರೀಕ್ಷೆ ಮಾಡಲಾಗುತ್ತದೆ. ನಂತರ ಕಸವನ್ನು ಹೊರಗಡೆ ಡಂಪ್ ಮಾಡಲಾಗುತ್ತದೆ. ಅದನ್ನು 21 ದಿನ ಕೊಳೆಯಲು ಬಿಡುತ್ತಾರೆ. ಚನ್ನಾಗಿ ಕೊಳೆಯಲು ಇಎಂ ಕಲ್ಚರ್ ಕೆಮಿಕಲ್ ಸಿಂಪಡಿಸಲಾಗುತ್ತದೆ. ಕಸದಿಂದ ಹೊರ ಹೊಮ್ಮುವ ನೀರಿನ ತ್ಯಾಜ್ಯವು ಅಲ್ಲಿಯೇ ಪಕ್ಕದ ಗುಂಡಿಯಲ್ಲಿ ಸಂಗ್ರಹವಾಗುತ್ತದೆ. ಕಸ ಪೂರ್ತಿ ಕೊಳೆತ ಬಳಿಕ 35 ಎಂಎಂ ಟ್ರಾಮೆಲ್ ಯಂತ್ರದಲ್ಲಿ ಹಾಕಿದ ಮೇಲೆ ಪ್ಲಾಸ್ಟಿಕ್, ಗಾಜು, ಕಲ್ಲು ಸೇರಿದಂತೆ ಇನ್ನುಳಿದ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ಬಳಿಕ 16 ಎಂಎಂ ಟ್ರಾಮೆಲ್ ಯಂತ್ರದಲ್ಲಿ ಮತ್ತಷ್ಟು ಕಸವನ್ನು ಪಿಲ್ಟರ್ ಮಾಡಲಾಗುತ್ತದೆ. ಕೊನೆಗೆ 4 ಎಂಎಂ ಯಂತ್ರದಲ್ಲಿ ಬೇರ್ಪಡಿಸಿದಾಗ ಉತ್ತಮ ಗುಣಮಟ್ಟದ ಗೊಬ್ಬರ ತಯಾರಾಗುತ್ತಿದೆ. ಇಲ್ಲಿ 35 ಜನರು ಎರಡು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಾರೆ. ಪಾಲಿಕೆಯಿಂದ ಇಬ್ಬರು ಮೇಲ್ವಿಚಾರಕನ್ನು ನೇಮಕ ಮಾಡಲಾಗಿದೆ ಎಂದು ಈ ಟಿವಿ ಭಾರತಕ್ಕೆ ಪಾಲಿಕೆ ಪರಿಸರ ಅಭಿಯಂತರ ಹನುಮಂತ ಕಲಾದಗಿ ತಿಳಿಸಿದರು.
ಪೌರಕಾರ್ಮಿಕರು ಎಷ್ಟಿದ್ದಾರೆ..?373 ನೇರ ಪಾವತಿ, 272 ಖಾಯಂ, 689 ಗುಂಪು ಕಾರ್ಮಿಕರು ಸೇರಿ ಒಟ್ಟು 1334 ಪೌರ ಕಾರ್ಮಿಕರು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಸ ವಿಲೇವಾರಿಗೆ ಬಳಸುವ ವಾಹನಗಳೇಷ್ಟು..?ಬೆಳಗಾವಿ ನಗರದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ 114 ಆಟೋ ಟಿಪ್ಪರ್ , 11 ಕಾಂಪ್ಯಾಕ್ಟರ್, 8 ಟಿಪ್ಪರ್, 3 ಜೆಸಿಬಿ, 3 ಸಕ್ಕಿಂಗ್ ಯಂತ್ರವುಳ್ಳ ವಾಹನ, 2 ಸಕ್ಕಿಂಗ್ ಕಮ್ ಜಟ್ಟಿಂಗ್ ವಾಹನ, 4 ಮ್ಯಾನ್ ಹೋಲ್ ಡಿಸಿಲ್ಟಿಂಗ್ ಯಂತ್ರಗಳ ವಾಹನ ಸೇರಿ ಒಟ್ಟು 172 ವಾಹನಗಳನ್ನು ಬಳಸಲಾಗುತ್ತಿದೆ.