ಕರ್ನಾಟಕ

karnataka

ETV Bharat / state

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಗಮ ; ಶೇ. 80 ರಷ್ಟು ಮಂದಿ ಹಾಜರು - VAO EXAM

ಗ್ರಾಮ ಆಡಳಿತ ಅಧಿಕಾರಿಯ ಲಿಖಿತ ಪರೀಕ್ಷೆ ಸುಗಮವಾಗಿ ನಡೆದಿದ್ದು, ಪರೀಕ್ಷೆಗೆ ಶೇ. 80 ರಷ್ಟು ಮಂದಿ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್​. ಪ್ರಸನ್ನ ತಿಳಿಸಿದ್ದಾರೆ.

Tumakuru
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪರಿಶೀಲಿಸಿದ ಪೊಲೀಸರು (ETV Bharat)

By ETV Bharat Karnataka Team

Published : Oct 27, 2024, 8:01 PM IST

Updated : Oct 27, 2024, 8:28 PM IST

ಬೆಂಗಳೂರು : ಗ್ರಾಮ ಆಡಳಿತ ಅಧಿಕಾರಿಯ (ವಿಎಒ) ಒಂದು ಸಾವಿರ ಹುದ್ದೆಗಳ‌ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಲಿಖಿತ ಪರೀಕ್ಷೆ ಅತ್ಯಂತ ಸುಗಮವಾಗಿ ನಡೆಯಿತು. ಪರೀಕ್ಷೆಗೆ ಶೇ. 80 ರಷ್ಟು ಮಂದಿ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಬೆಂಗಳೂರಿನ‌ 88 ಕೇಂದ್ರ ಸೇರಿದಂತೆ ರಾಜ್ಯದ 1,173 ಕೇಂದ್ರಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಪರೀಕ್ಷೆ ನಡೆಯಿತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟು 4.79 ಲಕ್ಷ ಅಭ್ಯರ್ಥಿಗಳ ಪೈಕಿ 4.16 ಲಕ್ಷ ಮಂದಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಅವರಲ್ಲಿ ಶೇ‌. 80 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ವಿವರಿಸಿದರು.

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಗಮ (ETV Bharat)

ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳನ್ನು ಅತಿ ಸೂಕ್ಷ್ಮ ಎಂದು ಪರಿಗಣಿಸಿದ್ದ ಕಾರಣ ಆ ಜಿಲ್ಲೆಗಳಲ್ಲಿ ಹೆಚ್ಚಿನ ವಿಶೇಷ ನಿಗಾ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ತಿಳಿಸಿದರು.

ಕಮಾಂಡ್ ಸೆಂಟರ್​ನಿಂದ ಪರೀಕ್ಷೆ ವೀಕ್ಷಣೆ :ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ನಡೆದ ಪರೀಕ್ಷೆಯನ್ನು ಕೆಇಎ ಕಮಾಂಡ್ ಸೆಂಟರ್​ನಲ್ಲಿ ಕುಳಿತು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ವೀಕ್ಷಿಸಿದರು. ಪರೀಕ್ಷೆ ಕಾರಣಕ್ಕೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಕೂಡ ಕಮಾಂಡ್ ಸೆಂಟರ್​ಗೆ ಭೇಟಿ ನೀಡಿ ಕೆಲ ಹೊತ್ತು ವೀಕ್ಷಿಸಿದರು.

ತುಮಕೂರಿನಲ್ಲಿ ಪರೀಕ್ಷಾ ಪ್ರಾಧಿಕಾರದ ಸೂಚನೆ ಪಾಲನೆ : ತುಮಕೂರಿನಲ್ಲಿ ಪರೀಕ್ಷೆಗೆ ಹಾಜರಾದ ಪ್ರತಿಯೊಬ್ಬ ಅಭ್ಯರ್ಥಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿದ್ದಾರೆ. ಪರೀಕ್ಷಾರ್ಥಿಗಳು ಅರ್ಧ ತೋಳಿನ ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಅಂಗಿ, ಕಡಿಮೆ ಸಂಖ್ಯೆಯ ಜೇಬುಗಳಿರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಬಂದಿದ್ದರು. ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಲು ಅವಕಾಶ ಕಲ್ಪಿಸಿರಲಿಲ್ಲ. ಪರೀಕ್ಷಾ ಕೊಠಡಿಯೊಳಗೆ ಶೂ, ಕಿವಿಯೋಲೆ, ಉಂಗುರ, ಕಡಗ ಸೇರಿದಂತೆ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸಲು ಅವಕಾಶ ನಿರ್ಬಂಧಿಸಲಾಗಿತ್ತು.

ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್ ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿರಲಿಲ್ಲ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಇತರೆ ಲೋಹದ ಆಭರಣಗಳನ್ನೂ ಧರಿಸುವಂತಿರಲಿಲ್ಲ.

ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ:ಎಲೆಕ್ಟ್ರಾನಿಕ್ ವಸ್ತು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂ ಟೂತ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿರಲಿಲ್ಲ. ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿದ್ದರಿಂದ ಕುಡಿಯುವ ನೀರಿನ ಬಾಟಲಿಗೂ ಸಹ ಅನುಮತಿ ನೀಡಿರಲಿಲ್ಲ.

ಚಾಮರಾಜನಗರದಲ್ಲಿ ವಿಇಒ ಪರೀಕ್ಷೆ ಸುಸೂತ್ರ :ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಭಾನುವಾರ ಸಂಜೆ 4.30 ರಲ್ಲಿ ನೇಮಕಾತಿ ಪರೀಕ್ಷೆ ಮುಕ್ತಾಯಗೊಂಡಿದೆ‌.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಟ್ಟ ಪರೀಕ್ಷೆ ಇದಾಗಿದ್ದು, ವಿಇಒ ನೇಮಕಾತಿಗೆ ನಡೆದ ಮೊದಲ ಪರೀಕ್ಷೆ ಇದಾಗಿದೆ‌. ಜಿಲ್ಲೆಯ 10ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ 7 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪುರುಷ ಅಭ್ಯರ್ಥಿಗಳಿಗೆ ಜೀನ್ಸ್ ಪ್ಯಾಂಟ್, ತುಂಬುತೋಳಿನ ಶರ್ಟ್, ಶೂ, ಕತ್ತು, ಕೈಗಳ ದಾರ, ಬೆಲ್ಟ್​ನ್ನು ಬಿಚ್ಚಿಸಿ ಪರೀಕ್ಷಾ ಕೇಂದ್ರಗಳ ಒಳಕ್ಕೆ ಬಿಡಲಾಯಿತು. ಮಾಂಗಲ್ಯ, ಕಾಲುಂಗುರ ಹೊರತುಪಡಿಸಿ ಯಾವುದೇ ಆಭರಣ ಧರಿಸುವಂತಿರಲಿಲ್ಲ. ಜೊತೆಗೆ, ಮಾಸ್ಕ್​ಗೂ ಕೂಡ ನಿರ್ಬಂಧ ಹೇರಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಾ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ :ಗ್ರಾಮ ಆಡಳಿತಾಧಿಕಾರಿ ಕನ್ನಡ ಕಡ್ಡಾಯ ಪರೀಕ್ಷೆ ಯಶಸ್ವಿ: ಶೇ.80ರಷ್ಟು ಅಭ್ಯರ್ಥಿಗಳು ಹಾಜರು

Last Updated : Oct 27, 2024, 8:28 PM IST

ABOUT THE AUTHOR

...view details