ಬೆಂಗಳೂರು:ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ಆ ಬಗ್ಗೆ ಕೆಲವೇ ಗಂಟೆಗಳಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ತಿಳಿಸಿದರು. ಮಲ್ಲೇಶ್ವರದ ಅರಣ್ಯ ಭವನದಲ್ಲಿ ಸೋಮವಾರ, ಕಾಡ್ಗಿಚ್ಚು ತಡೆ, ನಿಯಂತ್ರಣಕ್ಕೆ ಸಿದ್ಧತೆ ಕುರಿತಂತೆ ಉನ್ನತಾಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.
ಸಕಾಲದಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು ಈ ಸಂದರ್ಭದಲ್ಲಿ ಸಚಿವರು ವೀಕ್ಷಿಸಿದರು. ಈ ಮಾಹಿತಿಯ ಬಗ್ಗೆ ಅರಣ್ಯ ಇಲಾಖೆಯ ಅಗ್ನಿ ನಿಗ್ರಹ ಕೋಶದಿಂದ ಸತತ ನಿಗಾ ಇಡಬೇಕು. ಬೆಂಕಿ ಕಾಣಿಸಿಕೊಂಡ ಮಾಹಿತಿ ಸಕಾಲದಲ್ಲಿ ಲಭ್ಯವಾದರೆ ಕಾಡಿಗೆ ಹೆಚ್ಚಿನ ಹಾನಿ ಆಗದಂತೆ ತಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಡ್ಗಿಚ್ಚು ನಿಯಂತ್ರಿಸಬೇಕು ಎಂದರು.
ಹಾಟ್ ಸ್ಪಾಟ್‌ಗಳು ಯಾವುವು?:ರಾಜ್ಯದ ಕೆಲವು ಅರಣ್ಯಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಪದೇ ಪದೇ ಕಾಡ್ಗಿಚ್ಚು ಸಂಭವಿಸುತ್ತಿರುವುದನ್ನು 15 ವರ್ಷಗಳ ದತ್ತಾಂಶದಿಂದ ಕ್ರೋಡೀಕರಿಸಿದ್ದು, ಹಾಟ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ ಎಂಬ ಮಾಹಿತಿಯನ್ನು ಖಂಡ್ರೆ ಪಡೆದರು. ಈ ಪ್ರದೇಶಗಳಲ್ಲಿ ಹೆಚ್ಚಿನ ಅಗ್ನಿ ವೀಕ್ಷಕರನ್ನು (ಫೈರ್ ವಾಚರ್ಸ್) ನಿಯೋಜಿಸಲು ಮತ್ತು ಡ್ರೋನ್ ಕ್ಯಾಮರಾಗಳ ಮೂಲಕ ಕಣ್ಗಾವಲಿಡುವಂತೆ ನಿರ್ದೇಶಿಸಿದರು.
ಕ್ರಿಮಿನಲ್ ಮೊಕದ್ದಮೆ:ಕೆಲವು ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುತ್ತಿರುವುದೂ ಬೆಳಕಿಗೆ ಬಂದಿದೆ. ಇಂತಹ ವಿದ್ರೋಹಿಗಳ ಮತ್ತು ಸಂಚುಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಿಳಿಸಿದರು.
ದೂರ ಸಂವೇದಿ ತಂತ್ರಜ್ಞಾನ ಎಂದರೇನು?:ದೂರ ಸಂವೇದಿ ತಂತ್ರಜ್ಞಾನ ಉಪಗ್ರಹಗಳ ನೆರವಿನಿಂದ ಮಾಹಿತಿ ನೀಡುವ ತಂತ್ರಜ್ಞಾನ. ಇದು ಬಹಳ ವರ್ಷಗಳಿಂದ ಬಳಕೆ ಆಗುತ್ತಿದೆ. ಆದರೆ ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರಕ್ಕೆ (ಎನ್ಆರ್ಎಸ್ಸಿ) ಬಂದು, ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಗೆ (ಎಫ್ಎಸ್ಐ) ಬರುತ್ತಿತ್ತು. ನಂತರ ಅವರು ಆಯಾ ರಾಜ್ಯಗಳಿಗೆ ಮಾಹಿತಿ ತಲುಪಿಸುತ್ತಿದ್ದರು. ಈಗ ನೇರವಾಗಿ ನಾಸಾದಿಂದ ಇಸ್ರೋದ ಎನ್ಆರ್ಎಸ್ಸಿಗೆ ಬಂದು ಅಲ್ಲಿಂದ ಕರ್ನಾಟಕ ದೂರ ಸಂವೇದಿ ಸಂಸ್ಥೆಗೆ (ಕೆಎಸ್ಆರ್ಎಸ್ಸಿ) ಬರುತ್ತದೆ. ಆ ಮಾಹಿತಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆ ಆಗುತ್ತದೆ. ಇದರಿಂದ ತತ್‌ಕ್ಷಣವೇ ಸ್ಪಂದಿಸಲು, ಬೆಂಕಿ ನಂದಿಸಲು ಸಾಧ್ಯವಾಗಲಿದ್ದು, ಇದು ಹೆಚ್ಚಿನ ಅರಣ್ಯ ನಾಶ ತಡೆಯುತ್ತದೆ.
ಫೀಡ್ ಬ್ಯಾಕ್ ವ್ಯವಸ್ಥೆ:ಈ ತಂತ್ರಜ್ಞಾನದಲ್ಲಿ ಕಾಡ್ಗಿಚ್ಚಿನ ಎಚ್ಚರಿಕೆ (ಅಲರ್ಟ್) ಬಂದ ಬಳಿಕ ಕೈಗೊಂಡಕ್ರಮದ ಸ್ಪಂದನೆ (ಫೀಡ್ ಬ್ಯಾಕ್) ಹಾಕಲು ಅವಕಾಶವಿದೆ. ಇಲ್ಲಿ ಅಗ್ನಿ ನಂದಿಸುತ್ತಿರುವ ಚಿತ್ರಗಳನ್ನು ಸಹ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಅಗ್ನಿ ನಿಯಂತ್ರಣಕ್ಕೆ ಬಂದಿದೆಯೋ ಇಲ್ಲವೋ ಎಂಬ ಮಾಹಿತಿಯೂ ಲಭ್ಯವಾಗಲಿದೆ. ಹೀಗಾಗಿ ಅರಣ್ಯಕ್ಕೆ ಮತ್ತು ಜೀವಜಂತುಗಳಿಗೆ ಹಾನಿ ಆಗದಂತೆ ತಡೆಯಲು ಸಾಧ್ಯವಾಗಿದೆ.
ಇದನ್ನೂ ಓದಿ:ರಾಜ್ಯಾದ್ಯಂತ ಶೀಘ್ರದಲ್ಲೇ ಮತ್ತೊಮ್ಮೆ ಕಂದಾಯ ಅದಾಲತ್ಗೆ ಚಾಲನೆ: ಸಚಿವ ಕೃಷ್ಣ ಭೈರೇಗೌಡ