ಕರ್ನಾಟಕ

karnataka

ETV Bharat / state

ಉಳಗಾ- ಕೆರವಡಿ ಸಂಪರ್ಕದ ಬಾರ್ಜ್ ಬೆಳಗಾವಿಗೆ: ಶಾಲೆ ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವಿದ್ಯಾರ್ಥಿಗಳು! - Ulaga Keravadi connection barge - ULAGA KERAVADI CONNECTION BARGE

ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಬಂದರು ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಹಾಗೂ ಅಧಿಕಾರಿಗಳು ಬಾರ್ಜ್​ ಅನ್ನು ಕೊಂಡೊಯ್ಯದಂತೆ ಸೂಚಿಸಿದ್ದರೂ, ಬೆಳಗಾವಿಗೆ ಅಧಿಕಾರಿಗಳು ಬಂದು ಬಾರ್ಜ್​ ಅನ್ನು ಸಾಗಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Villagers appealed DC Lakshmi Priya
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು (ETV Bharat)

By ETV Bharat Karnataka Team

Published : Jul 29, 2024, 3:45 PM IST

Updated : Jul 29, 2024, 10:03 PM IST

ಕಾರವಾರ: ತಾಲೂಕಿನ ಉಳಗಾ- ಕೆರವಡಿ ಸಂಪರ್ಕ ಕೊಂಡಿಯಾಗಿರುವ ಬಾರ್ಜ್ ಅನ್ನು ಬೆಳಗಾವಿಯಲ್ಲಿ ಎದುರಾಗಿರುವ ಪ್ರವಾಹ ನಿರ್ವಹಣೆಗೆ ಕೊಂಡೊಯ್ಯಲಾಗಿದೆ. ಆದರೆ ಈ ಬಗ್ಗೆ ಸ್ಥಳೀಯ ಪಂಚಾಯಿತಿ ಅವರಿಗೂ ತಿಳಿಸದೆ, ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಬಾರ್ಜ್ ಕೊಂಡೊಯ್ದಿದ್ದು, ಇಂದು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಉಳಗಾ- ಕೆರವಡಿ ಸಂಪರ್ಕದ ಬಾರ್ಜ್ ಬೆಳಗಾವಿಗೆ: ಶಾಲೆ ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವಿದ್ಯಾರ್ಥಿಗಳು! (ETV Bharat)

ಕಾರವಾರ ತಾಲೂಕಿನ ಕೆರವಡಿ-ಉಳಗಾ ನಡುವಿನ ಕಾಳಿ ನದಿ ದಾಟಲು ಈ ಬಾರ್ಜ್​ ಅನ್ನು 30 ವರ್ಷಗಳ ಹಿಂದೆ ಹಾಕಲಾಗಿದೆ. ಈ ಭಾಗದಲ್ಲಿ ಸೇತುವೆ ನಿರ್ಮಾಣ ಕೆಲಸ ಹಲವು ವರ್ಷದಿಂದ ನಡೆಯುತ್ತಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಇದರಿಂದ ಜನ ಇದೇ ಬಾರ್ಜ್ ಮೇಲೆಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ.

ಆದರೆ, ಕಳೆದ ಕೆಲ‌ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಪ್ರದೇಶದಲ್ಲಿ ಪ್ರವಾಹ ನಿರ್ವಹಣೆಗೆ ಬೆಳಗಾವಿ ಜಿಲ್ಲಾಧಿಕಾರಿ ಉತ್ತರಕನ್ನಡ ಜಿಲ್ಲಾಧಿಕಾರಿ ಬಳಿ ಬಾರ್ಜ್ ನೀಡುವಂತೆ ಕೋರಿದ್ದು, ಅದರಂತೆ ಜಿಲ್ಲಾಧಿಕಾರಿ ನಾಲ್ಕು ದಿನಗಳಿಗೆ ಬಾರ್ಜ್ ನೀಡಿದ್ದಾರೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡದೇ, ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಬಾರ್ಜ್ ಅನ್ನು ಬೆಳಗಾವಿಗೆ ಸಾಗಿಸಿರುವುದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿಯ ಈ ನಿರ್ಧಾರಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಾರ್ಜ್ ಅನ್ನು ಯಾವುದೇ ಕಾರಣಕ್ಕೂ ಇಲ್ಲಿಂದ ಬೆಳಗಾವಿಗೆ ಸಾಗಿಸಲು ಬಿಡುವುದಿಲ್ಲ ಎಂದು ಹಠ ಹಿಡಿದು ಭಾನುವಾರ ಸಂಜೆ ಬಾರ್ಜ್ ಇದ್ದ ಜಾಗದಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೆ, ಬಂದರು ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಹಾಗೂ ಅಧಿಕಾರಿಗಳು ಆಗಮಿಸಿ, ಬಾರ್ಜ್​ ಅನ್ನು ಬೆಳಗಾವಿಗೆ ಕೊಂಡೊಯ್ಯದರೆ ಇಲ್ಲಿನ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ನಿತ್ಯ ಓಡಾಡುವ ಜನರಿಗೆ ಸಮಸ್ಯೆಯಾಗಲಿದೆ ಎಂದು ಬೆಳಗಾವಿ ಅಧಿಕಾರಿಗಳಿಗೆ ತಿಳಿಸಿ, ಬಾರ್ಜ್​ ಅನ್ನು ತೆಗೆದುಕೊಂಡು ಹೋಗದಂತೆ ಸೂಚಿಸಿದ್ದರು. ಆದರೆ, ಮತ್ತೆ ಬಂದು ಬಾರ್ಜ್ ಕೊಂಡೊಯ್ದಿದ್ದಾರೆ. ಇದರಿಂದ ಸ್ಥಳೀಯರ ಸಂಚಾರಕ್ಕೆ ವ್ಯವಸ್ಥೆಯೇ ಇಲ್ಲದೆ ಪರದಾಡುವಂತಾಗಿದೆ.

ಗ್ರಾಮಸ್ಥರ ಪ್ರತಿಭಟನೆ (ETV Bharat)

"1996 ರಲ್ಲಿ ಕಾಳಿ ನದಿಯಲ್ಲಿ ದೋಣಿ ಮಗುಚಿ ಎಂಟು ಜನರು ಮೃತಪಟ್ಟಿದ್ದರು. ಆಗ ಅಂದಿನ ಶಾಸಕ ವಸಂತ ಅಸ್ನೋಟಿಕರ ಅವರು ಬಾರ್ಜ್ ವ್ಯವಸ್ಥೆ ಮಾಡಿದ್ದರು. ಇದೀಗ ಕದ್ರಾ ಜಲಾಶಯದಿಂದ ಕಾಳಿ ನದಿ ನೀರು ಬಿಟ್ಟರೆ ತೊಂದರೆಯಾಗುತ್ತದೆ. ಶಾಲೆಗೆ ಮಕ್ಕಳು ಕೂಡ ಹೋಗಲು ಕಷ್ಟವಾಗುತ್ತದೆ. ಯಾವುದೇ ಮುನ್ಸೂಚನೆ ನೀಡದೇ ಈ ರೀತಿ ಮಾಡುವುದು ಸರಿಯಲ್ಲ" ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಇಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರನ್ನು ಭೇಟಿ ಮಾಡಿರುವ ಮಕ್ಕಳು ಹಾಗೂ ಪಾಲಕರು ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಬಾರ್ಜ್ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿದ್ದಾರೆ. ನಾಲ್ಕು ದಿನದಮಟ್ಟಿಗೆ ಪರ್ಯಾಯ ವ್ಯವಸ್ಥೆಯಾಗಿ ಬಸ್ ಸಂಪರ್ಕವನ್ನಾದರೂ ಕಲ್ಪಿಸುವಂತೆ ಮನವಿ ಮಾಡಿದರು.

ಉಳಗಾ- ಕೆರವಡಿ ಸಂಪರ್ಕದ ಬಾರ್ಜ್ (ETV Bharat)

ಈ ವೇಳೆ ಜಿಲ್ಲಾಧಿಕಾರಿ "ಕೆಎಸ್​ಆರ್​ಟಿಸಿಗೆ ಹೇಳುತ್ತೇನೆ. ಒಂದೊಮ್ಮೆ ಅಲ್ಲಿ ಆಗದೇ ಇದ್ದಲ್ಲಿ, ಸ್ಥಳೀಯ ಗ್ರಾಮ ಪಂಚಾಯಿತಿ ಅವರು ವಾಹನ ಚಾಲಕರ ಹಣವನ್ನು ಭರಿಸುವ ವ್ಯವಸ್ಥೆ ಮಾಡಿಸಬೇಕು" ಎಂದು ಉಪಸ್ಥಿತರಿದ್ದ ಸ್ಥಳೀಯ ಗ್ರಾ.ಪಂ ಉಪಾಧ್ಯಕ್ಷರಿಗೆ ತಿಳಿಸಿದರು. ಆದರೆ, ಇದು ಸಾಧ್ಯವಾಗದ ಬಗ್ಗೆ ತಿಳಿಸಿದಾಗ ಕೆಎಸ್​ಆರ್​ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ ವ್ಯವಸ್ಥೆಗೆ ಸೂಚಿಸಿದರು. ಬಸ್ ಬಾರದೇ ಇದ್ದಲ್ಲಿ ತಮಗೆ ತಿಳಿಸಲು ಸೂಚಿಸಿದ ಅವರು ಸ್ಥಳೀಯ ಗ್ರಾಮ ಪಂಚಾಯಿತಿಯವರು ಸಹಕಾರ ನೀಡಬೇಕು ಎಂದು ಕೋರಿದರು.

ಸದ್ಯ ಬಸ್ ವ್ಯವಸ್ಥೆಗೆ ಸೂಚಿಸಿದ್ದರೂ ಕೂಡ ಜನ 15 ನಿಮಿಷದಲ್ಲಿ ಕ್ರಮಿಸಬಹುದಾದ ಸ್ಥಳಕ್ಕೆ 45 ಕಿ.ಮೀ ಸುತ್ತಿ ತೆರಳಬೇಕಾದ ಅನಿವಾರ್ಯತೆ ಇದೆ. ನಮಗೆ ಮೊದಲಿನ ಬಾರ್ಜ್ ವ್ಯವಸ್ಥೆಯೇ ಉತ್ತಮವಾಗಿತ್ತು. ನಾಲ್ಕು ದಿನದಲ್ಲಿಯೇ ಬಾರ್ಜ್ ತರಿಸುವ ವ್ಯವಸ್ಥೆ ಮಾಡಬೇಕು" ಎಂದು ಸ್ಥಳೀಯರು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು.

ಇದನ್ನೂ ಓದಿ:ಘಟಪ್ರಭಾ ಆರ್ಭಟಕ್ಕೆ ಬೆಚ್ಚಿ ಬಿದ್ದ ಗೋಕಾಕ್: ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಸಂತ್ರಸ್ತರು - rain effect in belagavi

Last Updated : Jul 29, 2024, 10:03 PM IST

ABOUT THE AUTHOR

...view details