ಬಳ್ಳಾರಿ:ದಟ್ಟವಾದ ಮಂಜಿನಿಂದಾಗಿ ಸರಿಯಾಗಿ ರಸ್ತೆ ಕಾಣದೇ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಸರಕು ಸಾಗಣೆ ವಾಹನ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಮದಿರೆ ಕ್ರಾಸ್ ಬಳಿ ಇಂದು ನಸುಕಿನ ಜಾವ ಸಂಭವಿಸಿದೆ.
ಚಾಲಕ ಬಾದನಹಟ್ಟಿಯ ರಂಗಪ್ಪ (35) ಮತ್ತು ಕಲ್ಕಂಬದ ಪರಮೇಶ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ. ಕುರುಗೋಡಿನ ಉಮೇಶಗೌಡ ಮತ್ತು ಎರ್ರೆಪ್ಪಗೌಡ ಗಾಯಗೊಂಡಿದ್ದಾರೆ.
ಕೋಳೂರು ಕ್ರಾಸ್ನಿಂದ ಕುರುಗೋಡು ಕಡೆಗೆ ಈ ವಾಹನ ಹೋಗುತ್ತಿದ್ದ ವೇಳೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಪುತ್ತೂರು: ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ಸುಳ್ಯದ ಮೂವರು ಸಾವು
ಹೊನ್ನಾವರ ಬಳಿ ಖಾಸಗಿ ಬಸ್ ಪಲ್ಟಿ:ಪ್ರವಾಸಕ್ಕೆ ಆಗಮಿಸಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಹೊನ್ನಾವರ-ಬೆಂಗಳೂರು ಹೆದ್ದಾರಿಯ ಹೊನ್ನಾವರ ತಾಲೂಕಿನ ಮುಗ್ವಾ ಕ್ರಾಸ್ ಬಳಿ ನಡೆದಿದೆ. ಪರಿಣಾಮ 20 ಪ್ರವಾಸಿಗರು ಗಾಯಗೊಂಡಿದ್ದಾರೆ.
ಪ್ರವಾಸಿಗರ ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ಆಗಮಿಸುತ್ತಿದ್ದು, ಮುಗ್ವಾ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಕ್ಕೆ ಹೋಗಿ ಪಲ್ಟಿಯಾಗಿದೆ. ಬಸ್‌ನಲ್ಲಿ ಕುಟುಂಬಸ್ಥರು, ಸ್ನೇಹಿತರು ಸೇರಿ ಪ್ರವಾಸಕ್ಕೆ ಬಂದಿದ್ದು, ಗಾಯಗೊಂಡ 20 ಮಂದಿ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಬಳಿ ಲಾರಿ ಅಪಘಾತ:ಸಿಎನ್ಜಿ ಗ್ಯಾಸ್ ಸಾಗಿಸುತ್ತಿದ್ದ ಲಾರಿ ಹಾಗೂ ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಚಿಕ್ಕಬಳ್ಳಾಪುರದ ಹುನೇಗಲ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಲಾರಿ ಚಾಲಕರಿಗೆ ಹಾಗೂ ಕ್ಲೀನರ್ಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ನಡು ರಸ್ತೆಯಲ್ಲೇ ಈ ಘಟನೆ ನಡೆದಿದ್ದರಿಂದ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಉಂಟಾಗಿತ್ತು. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ತಮ್ಮದಲ್ಲದ ತಪ್ಪಿಗೆ ಒಂದೇ ಕುಟುಂಬದ ನಾಲ್ವರು ಸಾವು; ರಸ್ತೆ ಅಪಘಾತಕ್ಕೆ ಕಾರಣ ತಿಳಿಸಿದ ಹಾವೇರಿ ಎಸ್ಪಿ