ಕರ್ನಾಟಕ

karnataka

ETV Bharat / state

2025ಕ್ಕೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು: ಸಚಿವ ಪರಮೇಶ್ವರ್ - Yettinahole Project - YETTINAHOLE PROJECT

ಎತ್ತಿನಹೊಳೆ ಯೋಜನೆಗೆ ಸೆ.8ರಂದು ಚಾಲನೆ ನೀಡಲಾಗುತ್ತಿದೆ. 2025ಕ್ಕೆ ತುಮಕೂರು ಜಿಲ್ಲೆಗೆ ನೀರು ಹರಿದು ಬರಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್​ ತಿಳಿಸಿದ್ದಾರೆ.

Home Minister G Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್​ (ETV Bharat)

By ETV Bharat Karnataka Team

Published : Sep 5, 2024, 7:22 AM IST

ಗೃಹ ಸಚಿವ ಜಿ.ಪರಮೇಶ್ವರ್​ (ETV Bharat)

ತುಮಕೂರು:"ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಸೆ.8ರಂದು ಚಾಲನೆ ನೀಡಲಾಗುತ್ತಿದೆ" ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

ಜಿಲ್ಲಾಧಿಕಾರಿಯವರ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, "ನೀರಿನ ಯಂತ್ರಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ಸ್ಫೋಟಗೊಂಡಿದ್ದವು. ಉಪ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್​​​ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದು ಯಶಸ್ವಿಯಾಗಿದೆ. ವಾಣಿವಿಲಾಸ ಸಾಗರ ಅಣೆಕಟ್ಟೆಗೆ 1,500 ಕ್ಯೂಸೆಕ್​ ನೀರು ಹರಿಸಲಾಗುತ್ತಿದೆ. ಇದು ಆ ಭಾಗಕ್ಕೆ ಉಪಯೋಗವಾಗಲಿದೆ. ಮುಂದಿನ ವರ್ಷ ಅರಸೀಕೆರೆ, ತಿಪಟೂರು ಭಾಗದಲ್ಲಿನ ಕಾಮಗಾರಿ ಪೂರ್ಣಗೊಳ್ಳಲಿದ್ದು ತುಮಕೂರಿಗೆ ನೀರು ಬರಲಿದೆ" ಎಂದರು.

"ಪರಮಶಿವಯ್ಯನವರು ಹಾಸನ, ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ಮಾಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದಕ್ಕೆ ನೇತ್ರಾವತಿ ತಿರುವು ಎಂದು ಹೆಸರಿಟ್ಟಿದ್ದರು. ಇದಕ್ಕೆ ಮಂಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಯೋಜನೆ ಕೈ ಬಿಡುವ ಪರಿಸ್ಥಿತಿಯೂ ಬಂದಿತ್ತು. ಇದಾದ ಬಳಿಕ ನೀರಾವರಿ ತಜ್ಞರು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುವ ಪ್ರದೇಶವನ್ನು ಗುರುತಿಸಿದರು. ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ, ಕೇದಿಹೊಳೆ ಇದೆಲ್ಲವೂ ಕ್ರೋಢೀಕೃತವಾಗಿ ಒಂದೆಡೆ ಬಂದರೆ 24 ಟಿಎಂಸಿ ನೀರು ಬರುತ್ತದೆ. ಈ ಯೋಜನೆಯ ಸಾಧಕ-ಬಾಧಕಗಳನ್ನು, ನೀರು ತೆಗೆದುಕೊಳ್ಳುವ ಸಾಧ್ಯ-ಅಸಾಧ್ಯತೆಯ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದರು" ಎಂದು ವಿವರಿಸಿದರು.

"ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇದಕ್ಕೆ ಬೇಕಾದ ಹಣಕಾಸು, ತಾಂತ್ರಿಕತೆಯನ್ನು ಅಧ್ಯಯನ ನಡೆಸಿ, ₹12,912.36 ಕೋಟಿ ಹಣವನ್ನು ಬಜೆಟ್​​ನಲ್ಲಿ ಒದಗಿಸಿ, 17-2-2014ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದರು. ಯೋಜನೆಯ ಇವತ್ತಿನ ಮೊತ್ತ ₹23,251 ಕೋಟಿ ತಲುಪಿದೆ. ಈ ಯೋಜನೆಯು ಮುಂಬರುವ ಮಾರ್ಚ್​ 2027ಕ್ಕೆ ಸಂಪೂರ್ಣಗೊಳ್ಳಲಿದೆ" ಎಂದು ಸಚಿವರು ಮಾಹಿತಿ ನೀಡಿದರು.

"ಎತ್ತಿನಹೊಳೆ ಯೋಜನೆಯ 24.01 ಟಿಎಂಸಿ ನೀರಿನಲ್ಲಿ ಜಿಲ್ಲೆಗೆ 5.470 ಟಿಎಂಸಿ ಹಂಚಿಕೆ ಮಾಡಲಾಗಿದೆ. 2.294 ಟಿಎಂಸಿ ಕುಡಿಯುವ ನೀರಿಗೆ, 3.446 ಸಣ್ಣ ನೀರಾವರಿ 113 ಕೆರೆಗಳ ಭರ್ತಿಗೆ ಅವಕಾಶವಿದೆ. ಒಟ್ಟು 3,117 (76 ಗುಂಟೆ) ಎಕರೆ ಜಾಗದಲ್ಲಿ 2022 ಎಕರೆ ಭೂಮಿಗೆ ಹಣ ಮಂಜೂರಾಗಿ ಭೂಸ್ವಾಧೀನವಾಗಿದೆ. ಶೇ 80ರಷ್ಟು ಭೂಸ್ವಾಧೀನಗೊಂಡಿದೆ. 1,200 ಕೋಟಿ ರೂ ಬಿಡುಗಡೆಯಾಗಿದೆ. 2025ಕ್ಕೆ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ನೀರು ಹರಿಯಲಿದೆ‌. ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 0.20 ಟಿಎಂಸಿ ಕುಡಿಯುವ ನೀರು ಪೂರೈಕೆಯಾಗಲಿದೆ" ಎಂದರು.

"1,200 ಕೋಟಿ ರೂ.ಗಳಲ್ಲಿ 448 ಕೋಟಿ ಹಂಚಿಕೆಯಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 434 ಕೋಟಿ ಬಾಕಿ ಇದೆ. 397 ಕೋಟಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಂತೆ ಹಂತಹಂತವಾಗಿ ಹಣ ಮಂಜೂರು ಮಾಡಲಾಗುವುದು‌" ಎಂದು ಜಿ.ಪರಮೇಶ್ವರ್​ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 150 ಕಿ.ಮೀ. ಕೆನಾಲ್:"ಜಿಲ್ಲೆಯಲ್ಲಿ ಮುಖ್ಯ ಕೆನಾಲ್ 150 ಕಿ.ಮೀ ಇದೆ. ಇದರಲ್ಲಿ 102 ಕಿ.ಮೀ ಕೆನಾಲ್ ಕಾಮಗಾರಿ ಪೂರ್ಣಗೊಂಡಿದೆ. 121 ಕಿ.ಮೀ ಫೀಡರ್ ಕೆನಾಲ್‌ನಲ್ಲಿ 106 ಕಿ.ಮೀ. ಪೂರ್ಣಗೊಂಡಿದೆ. ಜುಲೈ 2025ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿ ಸುಮಾರು 63 ಎಕರೆ ಅರಣ್ಯ ಭೂಮಿ ಈ ಯೋಜನೆಯಲ್ಲಿ ಬರುತ್ತದೆ" ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ:"ಮೊದಲನೆ ಯೋಜನೆ ಮಾಡಿದಾಗ ಕೊರಟಗೆರೆ ತಾಲೂಕಿನ ಬೈಲಗೊಂಡನಹಳ್ಳಿಯಲ್ಲಿ 2,500 ಸಾವಿರ ಎಕರೆ ಭೂಮಿ ಸೇರಿ ದೊಡ್ಡಬಳ್ಳಾಪುರ ತಾಲೂಕಿಗೆ ಸೇರಿದ 2500 ಭೂಮಿ ಇದೆ. ದೊಡ್ಡಬಳ್ಳಾಪುರ ಜಾಗವು ಅಲ್ಲಿನ ಭೂಮಿಯ ಮೌಲ್ಯಕ್ಕೆ ತೆಗೆದುಕೊಂಡರೆ, ತುಮಕೂರಿನಲ್ಲಿ 12 ಲಕ್ಷ ರೂ. ತೆಗೆದುಕೊಳ್ಳುತ್ತದೆ. ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನನ್ನು ಸಚಿವ ಸಂಪುಟ ಉಪ ಸಮಿತಿ ಸದಸ್ಯನನ್ನಾಗಿ ಮಾಡಲಾಯಿತು. ತದನಂತರ ಬಂದ ಸರ್ಕಾರ ಯೋಜನೆಯನ್ನು ಅಲ್ಲಿಗೆ ಕೈಬಿಟ್ಟರು. ಸದ್ಯ ಬೈಲಗೊಂಡಲಹಳ್ಳಿಯಲ್ಲಿ ಯಾವುದೇ ರಿಸರ್ವ್ ಭೂಮಿ ಇರುವುದಿಲ್ಲ. ಈ ಹಿಂದೆ ಭೂಮಿ ಕೊಡುವುದಾದರೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ರೈತರೊಂದಿಗಿನ ಸಭೆಯಲ್ಲಿ ತಿಳಿಸಿದ್ದೆ. ಇದಕ್ಕೆ ರೈತರು ನಿರಾಕರಿಸಿದ್ದರು" ಎಂದು ಅವರು ಹೇಳಿದ್ದಾರೆ.

ಶೇ.64ರಷ್ಟು ಕೆನಾಲ್​ ಕಾಮಗಾರಿ ಪೂರ್ಣ:"ಎತ್ತಿನಹೊಳೆ ಯೋಜನೆಯ ಕೆನಾಲ್​​​ ದಾರಿ ತಿಪಟೂರು 43 .ಕಿ.ಮೀ., ಚಿಕ್ಕನಾಯಕನಹಳ್ಳಿ 12 ಕಿ.ಮೀ, ತುರುವೆಕೆರೆ 1 ಕಿ.ಮೀ, ಗುಬ್ಬಿ 41 ಕಿ.ಮೀ, ತುಮಕೂರು ಗ್ರಾ 31, ಕೊರಟಗೆರೆ 19, ಮಧುಗಿರಿ (ಫೀಡರ್ ಕೆನಾಲ್) 40 ಕಿ.ಮೀ, ಪಾವಘಡ 42 ಕಿ.ಮೀ. ಕೆನಾಲ್ ಹಾದುಹೋಗಲಿದೆ. ಜಿಲ್ಲೆಯಲ್ಲಿ ಶೇ. 64ರಷ್ಟು ಮುಖ್ಯ ಕೆನಾಲ್ ಪೂರ್ಣಗೊಂಡಿದೆ" ಎಂದರು.

ಕೊರಟಗೆರೆ-ತುಮಕೂರು ಎಪಿಎಂಸಿ ಅವ್ಯವಹಾರ: "ಎಪಿಎಂಸಿ ಮಳಿಗೆಗಳನ್ನು ಹಂಚಿಕೆ‌ ಮಾಡಲು ಸರ್ಕಾರ ನಿಯಮಗಳನ್ನು ಮಾಡಿದೆ. ನಿಯಮಗಳ ಪ್ರಕಾರವೇ ಹಂಚಿಕೆ ಮಾಡಲಾಗುವುದು‌. ನಿಯಮ ಮೀರಿ ಹಂಚಿಕೆ ಮಾಡಿರುವುದು ಕಂಡುಬಂದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು‌‌. ಹತ್ತು ವರ್ಷಗಳ ಹಿಂದೆ ಎಪಿಎಂಸಿ ಮಳಿಗೆಗಳು ಹಂಚಿಕೆಯಾಗಿವೆ‌. ಆಗ ಏನೆಲ್ಲ ನಡೆದಿದೆ ಎಂಬುದನ್ನು ಪರಿಶೀಲಿಸಲಾಗುವುದು" ಎಂದು ತಿಳಿಸಿದರು.

ಹೇಮಾವತಿ:"ಜಿಲ್ಲೆಗೆ 22 ಜುಲೈ 2024 ರಿಂದ 25 ಆಗಸ್ಟ್ 2024ರವರೆ 3,915 ಎಂಸಿಎಫ್‌ಟಿ ನೀರು ಬಂದಿದೆ. ಪ್ರತಿ ದಿನ 1500 ಕ್ಯೂಸೆಕ್ ನೀರು ಬರುತ್ತಿದ್ದು, ಕುಣಿಗಲ್‌ವರೆಗು ಹೋಗುತ್ತಿದೆ. ಬುಗುಡನಹಳ್ಳಿ ಕೆರೆಯಲ್ಲಿ 290 ಎಂಸಿಎಫ್‌ಟಿ ನೀರು ಸಂಗ್ರಹವಿದೆ. ಸಣ್ಣ ನೀರಾವರಿ 27 ಕೆರೆಗಳು ಭರ್ತಿಯಾಗಿವೆ. ಆ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ನೀರು ಬರಲಿದೆ‌" ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.

ಸಿ.ಟಿ.ರವಿಗೆ ತಿರುಗೇಟು:"ನಾವು ಎತ್ತಿನಹೊಳೆ ಯೋಜನೆ ಪೂರ್ಣಗೊಂಡಿದೆ ಎಂದು ಎಲ್ಲಿಯೂ ಹೇಳಿಲ್ಲ. ಯೋಜನೆಯ 1ನೇ ಹಂತ ಕಾಮಗಾರಿ ಪೂರ್ಣಗೊಂಡಿದೆ. ಸಿ.ಟಿ.ರವಿ ಡಬಲ್ ಪದವೀಧರರು. ಅವರನ್ನು ತಪ್ಪಿಸಿ ಮಾಡಲಾಗುವುದಿಲ್ಲ" ಎಂದು ಪರಮೇಶ್ವರ್​ ಸಿ.ಟಿ.ರವಿ ಅವರಿಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ:ಮೆಟ್ರೋ ಕಾಮಗಾರಿಗೆ ಅಡ್ಡಿಯಾದ 41 ಮರಗಳ ಕಡಿಯಲು ಅನುಮತಿ ನೀಡಿದ ಹೈಕೋರ್ಟ್ - High Court allowed cutting tree

ABOUT THE AUTHOR

...view details