ಮೈಸೂರು:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೋಷಕ ನಟಿಯೊಬ್ಬಳು ಮೃತಪಟ್ಟ ಘಟನೆ ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ತುರಗನೂರು ಎಂಬ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ವಿದ್ಯಾ (35) ಮೃತಪಟ್ಟ ಪೋಷಕ ನಟಿ. ಪತಿಯೇ ಸುತ್ತಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಆರೋಪಿಸಿ ಮೃತ ವಿದ್ಯಾ ಪೋಷಕರು ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಬಳಿಕ ಆಕೆಯ ಪತಿ ನಂದೀಶ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇವರಿಬ್ಬರು 2018 ರಲ್ಲಿ ಮದುವೆಯಾಗಿದ್ದು, ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಕೊಲೆಯಾದ ವಿದ್ಯಾ 'ಬಜರಂಗಿ', 'ಅಜಿತ್', 'ವೇದ', 'ಜೈ ಮಾರುತಿ 800' ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ. ಅಲ್ಲದೇ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದ ಅವರು, ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಕಳೆದ ಹಲವು ದಿನಗಳಿಂದ ಗಂಡನ ಮನೆಯಲ್ಲಿ ವಾಸವಿರದೇ ಮೈಸೂರಿನ ತಮ್ಮ ತಾಯಿ ಮನೆಯಲ್ಲಿಯೇ ವಾಸವಿದ್ದರು.
ಕೌಟುಂಬಿಕ ಕಲಹ:ವಿದ್ಯಾ ಮತ್ತು ನಂದೀಶ್ ಕೌಟುಂಬಿಕ ಕಲಹದ ಹಿನ್ನೆಲೆ ಪರಸ್ಪರ ವಿಚ್ಛೇದನಕ್ಕೂ ಮುಂದಾಗಿದ್ದರು. ಆದರೆ, ಹಿರಿಯರ ಮಧ್ಯಸ್ಥಿಕೆಯಲ್ಲಿ ಮತ್ತೆ ಒಂದಾಗಿದ್ದರು. ನಿನ್ನೆ ರಾತ್ರಿ ಗಂಡನ ಜತೆ ಪೋನಿನಲ್ಲಿ ಮಾತನಾಡುವಾಗ ಮತ್ತೆ ಗಲಾಟೆಯಾಗಿದ್ದು, ಇದರಿಂದ ಸಿಟ್ಟಿಗೆದ್ದ ವಿದ್ಯಾ ಕಾರಿನಲ್ಲಿ ರಾತ್ರಿಯೇ ಬನ್ನೂರು ಬಳಿಯ ಗಂಡನ ಗ್ರಾಮ ತುರಗನೂರುಗೆ ಹೋಗಿದ್ದರು. ಅಲ್ಲಿ ರಾತ್ರಿ ಇಬ್ಬರಿಗೂ ಗಲಾಟೆಗಳಾಗಿದ್ದು, ಈ ವೇಳೆ ಗಂಡನೇ ಮನೆಯಲ್ಲಿದ್ದ ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ ಎಂದು ಮೃತ ವಿದ್ಯಾ ಪೋಷಕರು ಆರೋಪಿಸಿದ್ದು, ಆಕೆಯ ಪತಿ ನಂದೀಶನ ಮೇಲೆ ಗಂಭೀರ ಆರೋಪ ಮಾಡಿದ್ದಲ್ಲದೇ ದೂರು ಸಹ ನೀಡಿದ್ದಾರೆ.
ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಾರಿಯಾಗಿರುವ ಗಂಡ ನಂದೀಶನಿಗಾಗಿ ಶೋಧ ನಡೆಸಿದ್ದಾರೆ. ಮೃತಳ ಶವವನ್ನು ಕೆ.ಆರ್. ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಮುಂದಿನ ತನಿಖೆ ಕೈಕೊಂಡಿದ್ದೇವೆ. ಈ ಸಂಬಂಧ ಮೃತ ವಿದ್ಯಾಳ ತಾಯಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಡಿಷನಲ್ ಎಸ್ಪಿ ನಂದಿನಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾಮನಗರ: ಹಣಕ್ಕಾಗಿ ಪೀಡಿಸುತ್ತಿದ್ದ ಮಗನಿಗೆ ಮಚ್ಚಿನಿಂದ ಹೊಡೆದು ಕೊಂದ ತಂದೆ - Father Kills Son