ಬೆಂಗಳೂರು:"ದೇವಸ್ಥಾನ, ದೇವರು, ಭಕ್ತಿ ಏನು ಬಿಜೆಪಿಯವರ ಮನೆ ಆಸ್ತಿಯೇ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಿಡಿ ಕಾರಿದರು. ವಿಧಾನಸೌಧದಲ್ಲಿ ನಿನ್ನೆ (ಗುರುವಾರ) ರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯ ವೇಳೆ ಮುಖ್ಯಮಂತ್ರಿಗಳು ಮತ್ತು ಕೆಲವು ಮಂತ್ರಿಗಳು ಮಾಂಸ ಸೇವಿಸಿ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ''ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದು ಬಿಜೆಪಿಯವರಿಗೆ ತಿಳಿ ಹೇಳುತ್ತೇನೆ'' ಎಂದು ಗರಂ ಆದರು.
''ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ ವೈಯಕ್ತಿಕವಾದುದು. ಸುತ್ತೂರು ಮಠ, ದೇವಸ್ಥಾನದ ಗರ್ಭಗುಡಿಗೆ ಹೋಗುವುದೆಲ್ಲಾ ವೈಯಕ್ತಿಕ ವಿಚಾರ. ಬಿಜೆಪಿಯವರಿಗೆ ಏಕೆ ಹೊಟ್ಟೆ ಉರಿ'' ಎಂದು ತಿರುಗೇಟು ನೀಡಿದರು. ಬಿಜೆಪಿಯವರು ಅಧಿಕಾರಕ್ಕೆ ಬಂದು 10 ವರ್ಷವಾಗಿದೆ. ಒಂದಷ್ಟು ರಾಜ್ಯಗಳಲ್ಲಿ ಈಗ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವ ಮುಂಚಿತವಾಗಿಯೂ ಧಾರ್ಮಿಕ ದತ್ತಿ ಇಲಾಖೆ ಇರಲಿಲ್ಲವೇ? ದೇವಸ್ಥಾನಗಳನ್ನು ಕಾಂಗ್ರೆಸ್ ಸರ್ಕಾರಗಳು ಊರ್ಜಿತ ಮಾಡಿಲ್ಲವೇ? ಕೆಂಗಲ್ ಹನುಮಂತಯ್ಯ ಅವರು 2 ರೂಪಾಯಿಗಳಿಗೆ ಭಗವದ್ಗೀತೆಯ ಸಣ್ಣ ಪುಸ್ತಕಗಳನ್ನು ಹಂಚುತ್ತಿದ್ದರು. ನಾವು ಸರ್ವ ಧರ್ಮಗಳನ್ನು ಸಮಾನತೆಯಿಂದ ನೋಡುವವರು. ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲರನ್ನೂ ಗೌರವದಿಂದ ನೋಡುತ್ತೇವೆ. ಯುಪಿಎ ಸರ್ಕಾರ ಜೈನರನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರ್ಪಡೆ ಮಾಡಿತ್ತು. ಊರಲ್ಲಿ ಹುಟ್ಟುವ ಹೋರಿಗಳೆಲ್ಲಾ ಬಸವ ಆಗಲು ಸಾಧ್ಯವೇ? ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಮಾಡಲಿ'' ಎಂದರು.