ಕರ್ನಾಟಕ

karnataka

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಟೀಂ ಇಂಡಿಯಾ ಥ್ರೋಡೌನ್​ ಪರಿಣತ ರಾಘವೇಂದ್ರ ವಿಶೇಷ ಪೂಜೆ - Throwdown Specialist Raghavendra

By ETV Bharat Karnataka Team

Published : Jul 11, 2024, 1:06 PM IST

ಭಾರತ ಕ್ರಿಕೆಟ್​ ತಂಡದ ಥ್ರೋಡೌನ್​ ಪರಿಣತ ರಾಘವೇಂದ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

throwdown specialist raghavendra
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಥ್ರೋಡೌನ್​ ಪರಿಣತ ರಾಘವೇಂದ್ರ (ETV Bharat)

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಭಾರತ ಕ್ರಿಕೆಟ್​ ತಂಡ ಇತ್ತೀಚೆಗೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಮೂಲಕ ನಿವೃತ್ತರಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರಿಗೆ ತಂಡ ಗೆಲುವಿನ ಉಡುಗೊರೆ ನೀಡಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ತಂಡದ ಥ್ರೋಡೌನ್​ ಪರಿಣತ ರಾಘವೇಂದ್ರ ಅವರು ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ.

ರಾಘವೇಂದ್ರ ಅವರು ಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಆರಂಭದಲ್ಲಿ ದೇವರ ದರುಶನ ಪಡೆದ ಅವರು ಸಂಕಲ್ಪ ಮಾಡಿದರು. ಬಳಿಕ ಮಹಾಭಿಷೇಕ ಸೇವೆ ಸಮರ್ಪಿಸಿದರು.

ಈ ಹಿಂದೆ ಕುಕ್ಕೆಗೆ ಬಂದಿದ್ದ ಇವರು ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರೆ ಸೇವೆ ನೆರವೇರಿಸುವುದಾಗಿ ಹರಕೆ ಮಾಡಿಕೊಂಡಿದ್ದರು. ಅದರಂತೆ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಣೆ ಮಾಡಿದರು.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ರಾಘವೇಂದ್ರ, ಭಾರತ ಕ್ರಿಕೆಟ್​​ ತಂಡದ ಥ್ರೋಡೌನ್ ಪರಿಣತರಾಗಿ ಕಳೆದ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಚಯದವರ ಮೂಲಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿದ್ದ ಅವರು ಕಾಲಕ್ರಮೇಣ ಭಾರತ ತಂಡದ ಭಾಗವಾಗಿದ್ದಾರೆ. ಸ್ವಂತ ಶ್ರಮದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ, ಭಾರತ ತಂಡದ ಬ್ಯಾಟಿಂಗ್​ ಯಶಸ್ಸಿನಲ್ಲಿ ಅಮೂಲ್ಯ ಕಾಣಿಕೆ ನೀಡುತ್ತಿದ್ದಾರೆ. ಥ್ರೋಡೌನ್ ಕಲೆಯ ಮೂಲಕ ಬ್ಯಾಟರ್​ಗಳ ತರಬೇತಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ರಾಘವೇಂದ್ರ ಅವರಿಗೆ ಸುಬ್ರಹ್ಮಣ್ಯ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯರು ಅವರು ಶಾಲು ಹೊದಿಸಿ, ಮಹಾಪ್ರಸಾದ ಮತ್ತು ಮಹಾಭಿಷೇಕದ ಪ್ರಸಾದ ನೀಡಿದರು. ಬಳಿಕ ದೇವಳದ ಆಡಳಿತ ಕಚೇರಿಯಲ್ಲಿ ಅವರನ್ನು ಅಲ್ಲಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವಳದ ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್., ಹರೀಶ್, ಕೃಷ್ಣಪ್ರಸಾದ್ ಕೆ.ಜಿ.ಭಟ್, ಸುಬ್ರಹ್ಮಣ್ಯದ ಸ್ನೇಹಿತರಾದ ಪಪ್ಪು ಲೋಕೇಶ್, ದೀಪಕ್ ನಂಬಿಯಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಜೋಗ ಜಲಪಾತದ ವೈಭವ ಸವಿಯಲು ಹುಬ್ಬಳ್ಳಿಯಿಂದ ವಿಶೇಷ ಬಸ್​ ವ್ಯವಸ್ಥೆ - Special Bus For Jog Falls

ABOUT THE AUTHOR

...view details