ಬೆಂಗಳೂರು: ನರಮಂಡಲದ ಸಮಸ್ಯೆಯಿಂದ ಉಂಟಾಗುವ ಮಾರಣಾಂತಿಕ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬರಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ (MER) ಸಿಸ್ಟಮ್” ಬಳಸಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ಫೋರ್ಟಿಸ್ ಆಸ್ಪತ್ರೆ ನರ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ, ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರಕರ್ ಹಾಗೂ ನರವಿಜ್ಞಾನ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ MER ವ್ಯವಸ್ಥೆಯನ್ನು ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದೆ.
ಈ ಕುರಿತು ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ ರಘುರಾಮ್ ಜಿ ಮಾತನಾಡಿ, ನರಮಂಡಲದಲ್ಲಿ ಆಗುವ ಸಮಸ್ಯೆಯಿಂದ ಉಂಟಾಗುವ ಪಾರ್ಕಿನ್ಸನ್ ವಯಸ್ಸಾಗಿರುವ ಜನರಲ್ಲಿ ಕಾಡುತ್ತದೆ. ಈ ಕಾಯಿಲೆ ಬಂದವರಿಗೆ ಇಡೀ ದೇಹ ನಡುಕು ಉಂಟಾಗುತ್ತದೆ. 68 ವರ್ಷದ ಪ್ರಕಾಶ್ ಎಂಬುವರು ಸಹ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು.
ಅಷ್ಟೇ ಅಲ್ಲದೆ, ರಕ್ತದೊತ್ತಡ, ಮಧುಮೇಹದಂತಹ ಇತರ ಆರೋಗ್ಯ ಸಮಸ್ಯೆ ಹೊಂದಿದ್ದರು. ಈ ಹಿಂದೆ ಅವರು ತಮ್ಮ ಹೃದಯ, ಬೆನ್ನುಮೂಳೆ, ಅಂಡವಾಯುಗಳ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇಷ್ಟೆಲ್ಲ ಆರೋಗ್ಯ ಸಮಸ್ಯೆ ಹೊಂದಿರುವ ಇಳಿ ವಯಸ್ಸಿನ ಪ್ರಕಾಶ್ ಅವರ ಕುತ್ತಿಗೆಯೂ ಸೇರಿದಂತೆ ಇಡೀ ದೇಹವೇ ನಡುಕ ಉಂಟು ಮಾಡುವ ಪಾರ್ಕಿನ್ಸನ್ ಕಾಯಿಲೆ ಅವರನ್ನು ಸಂಪೂರ್ಣವಾಗಿ ನಲುಗಿಸಿತ್ತು ಎಂದು ಮಾಹಿತಿ ನೀಡಿದರು.