ಬೆಂಗಳೂರು:ವೈರಲ್ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೊಳಗಾಗಿ ಬಳಲುತ್ತಿದ್ದ ನೈಜೀರಿಯಾದ 23 ವರ್ಷದ ಯುವತಿಗೆ ಏಕಕಾಲದಲ್ಲೇ 'ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್' ಸರ್ಜರಿ ನಡೆಸುವ ಮೂಲಕ ಎರಡು ಶ್ರವಣ ಸಾಧನಗಳನ್ನು ಒಟ್ಟಿಗೆ ಅಳವಡಿಸುವಲ್ಲಿ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಹಿರಿಯ ಸಲಹೆಗಾರ ಡಾ.ಎಚ್.ಕೆ.ಸುಶೀನ್ ದತ್ ಹಾಗೂ ತಜ್ಞರ ಆರೈಕೆಯಲ್ಲಿ ಈ ಸಂಕೀರ್ಣ ಕಾರ್ಯವಿಧಾನವನ್ನು 9 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಈ ಕುರಿತು ಮಾತನಾಡಿದ ಡಾ.ಹೆಚ್.ಕೆ.ಸುಶೀನ್ ದತ್, ನೈಜೀರಿಯಾದ ಯುವತಿಗೆ ಮೂರು ವರ್ಷಗಳ ಹಿಂದೆ ಅತಿಯಾದ ವೈರಲ್ ಜ್ವರ ಕಾಣಿಸಿಕೊಂಡಿತ್ತು. ಇದರ ತೀವ್ರತೆಯಿಂದ ಕ್ರಮೇಣ ಅವರು ಮೊದಲು ಬಲಕಿವಿಯ ಕೇಳುವ ಶಕ್ತಿ ಕಳೆದುಕೊಂಡರು. ನಂತರ ಎಡ ಕಿವಿಯ ಶ್ರವಣ ಶಕ್ತಿಯೂ ಹೋಯಿತು. ದೊಡ್ಡ ಶಬ್ಧವನ್ನೂ ಸಹ ಅವರು ಕೇಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದರು. ನಮ್ಮ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಕಿವುಡುತನದ ತೀವ್ರತೆ ಅರಿವಾಯಿತು ಎಂದು ಹೇಳಿದರು.