ಕರ್ನಾಟಕ

karnataka

ETV Bharat / state

ಮೈಸೂರು ವಿವಿ ಘಟಿಕೋತ್ಸವ: ಎಂಎಸ್ಸಿಯಲ್ಲಿ ಮೇಘನಾಗೆ 15 ಗೋಲ್ಡ್​ ಮೆಡಲ್​, ಕನ್ನಡದಲ್ಲಿ ತೇಜಸ್ವಿನಿಗೆ 10 ಚಿನ್ನದ ಪದಕ - ಮೈಸೂರು

ಎಂಎ ಕನ್ನಡದಲ್ಲಿ ಹತ್ತು ಚಿನ್ನದ ಪದಕ, ನಾಲ್ಕು ನಗದು ಬಹುಮಾನ ಪಡೆದು ತೇಜಸ್ವಿನಿ ಎಂಬುವವರು ಮೈಸೂರು ವಿವಿ ಘಟಿಕೋತ್ಸವದಲ್ಲಿ ಎಲ್ಲರ ಗಮನಸೆಳೆದಿದ್ದಾರೆ.

ಚಿನ್ನದ ಪದಕ ಪಡೆದ ಮೈಸೂರು ವಿವಿ ವಿದ್ಯಾರ್ಥಿನಿಯರು
ಚಿನ್ನದ ಪದಕ ಪಡೆದ ಮೈಸೂರು ವಿವಿ ವಿದ್ಯಾರ್ಥಿನಿಯರು

By ETV Bharat Karnataka Team

Published : Mar 3, 2024, 9:08 PM IST

ಡಾ. ಸಿ ಎನ್ ಮಂಜುನಾಥ್

ಮೈಸೂರು :ಮೈಸೂರು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಎಂಎಸ್ಸಿ ಕೆಮಿಸ್ಟ್ರಿ ವಿಷಯದಲ್ಲಿ 15 ಚಿನ್ನದ ಪದಕ ಹಾಗೂ 5 ಬಹುಮಾನಗಳನ್ನು ಪಡೆದಿರುವ ಮೇಘನಾ ಎಚ್‌ ಎಸ್ ‘ಚಿನ್ನದ ಹುಡುಗಿ’ಯಾಗಿ ಹೊರಹೊಮ್ಮಿದ್ದಾರೆ. ಎಂ. ಎ ಕನ್ನಡ ವಿಷಯದಲ್ಲಿ ವಿ. ತೇಜಸ್ವಿನಿ 10 ಚಿನ್ನದ ಪದಕ ಮತ್ತು 4 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎಂ.ಎಸ್ಸಿ ಗಣಿತದಲ್ಲಿ ಡಿ. ದರ್ಶನ್‌ 5 ಚಿನ್ನದ ಪದಕ, 3 ಬಹುಮಾನ, ಬಿಎ ವಿಭಾಗದಲ್ಲಿ ಎಂ. ಸುಮಾ 5 ಚಿನ್ನದ ಪದಕ, 3 ಬಹುಮಾನ, ಬಿ. ನಂದೀಶ 4 ಚಿನ್ನ ಹಾಗೂ 10 ಬಹುಮಾನ, ಬಿ.ಕಾಂನಲ್ಲಿ ವೈ. ವೈ. ಸಿಂಧು ಒಂದು ಚಿನ್ನದ ಪದಕ ಹಾಗೂ 2 ಬಹುಮಾನ ಪಡೆದಿದ್ದಾರೆ.

ಬಿ.ಇಡಿಯಲ್ಲಿ ಎಂ. ಮಾನಸಾ ಹಾಗೂ ಕೆ. ರಂಜಿತಾ ತಲಾ 2 ಚಿನ್ನದ ಪದಕ, 2 ನಗದು ಬಹುಮಾನ, ಎಂಬಿಎ– ಅಗ್ರಿ ಬ್ಯುಸಿನೆಸ್‌ನಲ್ಲಿ ಲಿಖಿತಾ ಎಸ್. 5 ಚಿನ್ನದ ಪದಕ, ಎಂಕಾಂನಲ್ಲಿ ಪಿ. ಬಿ ಭಾಗ್ಯಶ್ರೀ ಭಟ್‌ 4 ಚಿನ್ನ, 2 ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಚಿನ್ನದ ಪದಕ ಪಡೆದ ಮೈಸೂರು ವಿವಿ ವಿದ್ಯಾರ್ಥಿನಿಯರು

ಎಂ.ಇಡಿಯಲ್ಲಿ 5 ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಗಳಿಸಿದ್ದಾರೆ. ಎಲ್‌ಎಲ್‌ಎಂನಲ್ಲಿ ನವ್ಯಶ್ರೀ ಎಚ್‌.ಎಲ್ 4 ಚಿನ್ನದ ಪದಕ, 3 ಬಹುಮಾನ, ಬಿ.ಎಸ್ಸಿಯಲ್ಲಿ ವಿ.ಪಿ ರೋಶಿನಿ 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ, ದೀಪಿಕಾಗೌಡ ಎಂ ಎಸ್ 4 ಚಿನ್ನದ ಪದಕ ಹಾಗೂ 7 ನಗದು ಬಹುಮಾನಕ್ಕೆ ಭಾಜನವಾಗಿದ್ದಾರೆ.

ತೇಜಸ್ವಿನಿಗೆ 10 ಚಿನ್ನದ ಪದಕ : ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಬಳಿಕ ಹಾಸ್ಟೆಲ್​ನಲ್ಲಿ ಆಶ್ರಯ ಪಡೆದರು. ಓದಿನ ಕಡೆಗೆ ಹೆಚ್ಚಿನ ಗಮನ ನೀಡಿದ ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ತೇಜಸ್ವಿನಿ ಮೈಸೂರು ವಿವಿ ಘಟಿಕೋತ್ಸವದಲ್ಲಿ ಎಂಎ ಕನ್ನಡದಲ್ಲಿ 10 ಚಿನ್ನದ ಪದಕ, ನಾಲ್ಕು ನಗದು ಬಹುಮಾನ ಪಡೆದಿದ್ದಾರೆ. ಇವರು ತಮ್ಮ ಸಾಧನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತೇಜಸ್ವಿನಿ ನಾಲ್ಕನೇ ತರಗತಿ ಓದುವಾಗಲೇ ತಾಯಿ ನಾಗಮ್ಮ ಕಾಲವಾದರು. ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ತಂದೆ ಹೆಚ್. ವೆಂಕಟೇಶ್ ಅವರನ್ನು ಕಳೆದುಕೊಳ್ಳಬೇಕಾಯಿತು. ಆದರೆ ಸಾಧನೆಗೆ ಈ ನೋವು ಅಡ್ಡಿ ಬರಲಿಲ್ಲ. ತಲಕಾಡಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿ, ಮಳವಳ್ಳಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಓದಿ, ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಬಿಎ ಪದವಿ ಅಭ್ಯಾಸ ಮಾಡಿದ ಇವರು ಈಗ ಚಿನ್ನದ ಹುಡುಗಿ ಎನಿಸಿಕೊಂಡಿದ್ದಾರೆ.

ದೃಷ್ಟಿ ದಿವ್ಯಾಂಗರ ಸಾಧನೆ :ಇನ್ನು ದೃಷ್ಟಿ ದಿವ್ಯಾಂಗರಾದ ಎಸ್. ಅನಘಾ ಸಮಾ ಕನ್ನಡ ಎಂಎ ಪದವಿಯಲ್ಲಿ ಒಂದು ಚಿನ್ನದ ಪದಕ ಗಳಿಸುವ ಮೂಲಕ ಇತರರ ಸಾಧನೆಗೆ ಮಾದರಿ ಎನಿಸಿದರು. ಇವರು ಪುಷ್ಪಲತಾ- ಕೆ. ಸತೀಶ್ ದಂಪತಿ ಪುತ್ರಿಯಾಗಿದ್ದು, ಪೋಷಕರು ಹಾಗೂ ಬೋಧಕರ ಉತ್ತೇಜನ, ಧೈರ್ಯ ತುಂಬುವ ಪ್ರವೃತ್ತಿಯಿಂದಾಗಿ ಈ ಸಾಧನೆ ಮಾಡಿರುವುದಾಗಿ ತಿಳಿಸಿದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಪರೀಕ್ಷೆಯನ್ನೂ ಪಾಸ್ ಮಾಡಿರುವ ಇವರು ಸದ್ಯದಲ್ಲಿ ವಿದ್ವತ್ ಪರೀಕ್ಷೆ ತೆಗೆದುಕೊಂಡಿದ್ದಾರೆ. ಅನಿವಾಸಿ ಭಾರತೀಯರಿಗೆ ಆನ್​ಲೈನ್​ನಲ್ಲಿ ಸಂಗೀತ ಪಾಠ ಮಾಡುವುದನ್ನೂ ಮುಂದುವರಿಸಿದ್ದು, ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಆಸಕ್ತಿ ಹೊಂದಿದ್ದಾರೆ.

ಸುಶಿಕ್ಷಿತರೇ ವಿನಾಶಕಾರಿ ವಿಚಾರದಲ್ಲಿ ತೊಡಗದಿರಿ : ಡಾ. ಸಿ ಎನ್ ಮಂಜುನಾಥ್ : ದುರದೃಷ್ಟವಶಾತ್ ಅನೇಕ ಸುಶಿಕ್ಷಿತ ಜನರೇ ಇಂದು ಕಾನೂನು ಬಾಹಿರ ಸಂಗತಿಗಳಲ್ಲಿ, ಅಪರಾಧಗಳಲ್ಲಿ, ದ್ವೇಷ ಮೊದಲಾದ ವಿನಾಶಕಾರಿ ವಿಚಾರಗಳಲ್ಲಿ ತೊಡಗಿರುವುದು ಆತಂಕಕಾರಿಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿಶ್ರಾಂತ ನಿರ್ದೇಶಕರಾದ ಡಾ ಸಿ ಎನ್ ಮಂಜುನಾಥ್ ಅವರು ಅಭಿಪ್ರಾಯಪಟ್ಟರು.

ಮೈಸೂರು ವಿವಿ ಕ್ರಾರ್ಡ್ ಭವನದಲ್ಲಿ ನಡೆದ 104ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚು ರಚನಾತ್ಮಕ ಉದ್ದೇಶಗಳಿಗಾಗಿ ಬಳಸಬೇಕಾದ ಅಗತ್ಯವಿದೆ. ನಮ್ಮ ಮುಂದಿನ ಜನಾಂಗದ ಯುವಜನರು ರಾಜ್ಯ ಹಾಗೂ ನಮ್ಮ ದೇಶವನ್ನು ಉನ್ನತ ಮಜಲಿಗೆ ಕೊಂಡೊಯ್ಯಬೇಕು ಎಂದರು.

ಒಂದು ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ಇದ್ದರೆ ಇಡೀ ಜಗತ್ತೇ ನಿಮ್ಮ ಕೈಯಲ್ಲಿ ಇದ್ದ ಹಾಗೆ. ಇಂದು ನಾವು 4ಜಿ/5ಜಿ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಈ ಜಿ ಗಳು ನಮಗೇನೂ ಹೊಸತಲ್ಲ. ಮೊದಲನೇ ಜಿ ಗುರು, ಎರಡನೇ ಜಿ ದೇವರು, ಮೂರನೇ ಜಿ ಗೈಡ್ ಅಥವಾ ಮಾರ್ಗದರ್ಶಿ, ನಾಲ್ಕನೇ ಜಿ ಗೂಗಲ್ ಆಗಿವೆ ಎಂದರು.

ಇದನ್ನೂ ಓದಿ :ನಮ್ಮ ಶಿಕ್ಷಣ ಸಂಸ್ಥೆಗಳು ವಿಶ್ವ ದರ್ಜೆಯ ಕೌಶಲ್ಯ ಜ್ಞಾನ ಒದಗಿಸಬೇಕು: ಥಾವರ್ ಚಂದ್ ಗೆಹ್ಲೋಟ್

ABOUT THE AUTHOR

...view details