ಮೈಸೂರು:14 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಲ ತಂದೆಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು 30 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೆ ಒಳಗಾದ ವ್ಯಕ್ತಿ ಮೈಸೂರಿನ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು, ಆಕೆಗೆ 14 ವರ್ಷದ ಪುತ್ರಿ ಇದ್ದಾಳೆ. ಮಲ ತಂದೆಯಾದ ಈತ ಆಕೆಯ ಮೇಲೆ ಅತ್ಯಾಚಾರವೆಸಗಿ, ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಮನನೊಂದಿದ್ದ ಬಾಲಕಿ, ಮಲ ತಂದೆಯ ಕಿರುಕುಳದ ವಿರುದ್ದ ಪತ್ರ ಬರೆದು ಮನೆಯಿಂದ ಹೊರ ಬಂದಿದ್ದಳು.
ಮಗಳು ಕಾಣದೇ ಇರುವುದಕ್ಕೆ ಸಂತ್ರಸ್ತೆಯ ತಾಯಿ, ಕೆ.ಆರ್. ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದರು. ಆಗ ಮಲ ತಂದೆ ಅತ್ಯಾಚಾರ ಎಸಗಿದ್ದ ವಿಷಯ ಬೆಳಕಿಗೆ ಬಂದಿತ್ತು. ಬಳಿಕ ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಅಲ್ಲದೇ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೈಮಾ ಖಮ್ರೋಜ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಲ ತಂದೆಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ಸಂತ್ರಸ್ತ ಬಾಲಕಿ ಕಾನೂನು ಸೇವಾ ಪ್ರಾಧಿಕಾರದಿಂದ ಐದು ಲಕ್ಷ ರೂ. ಪರಿಹಾರ ಪಡೆಯಲು ಅರ್ಹಳು ಎಂದು ತೀರ್ಪು ಕೊಟ್ಟಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.
ಇದನ್ನೂ ಓದಿ:ದಾವಣಗೆರೆ: ಅಪ್ರಾಪ್ತೆಯ ಅತ್ಯಾಚಾರ, ಅಪರಾಧಿಗೆ 20 ವರ್ಷ ಶಿಕ್ಷೆ
ದಾವಣಗೆರೆಯಲ್ಲಿ ಅಪರಾಧಿಗೆ 20 ವರ್ಷ ಜೈಲು:ದಾವಣಗೆರೆ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 20,000 ರೂ. ಸಾವಿರ ದಂಡ ವಿಧಿಸಿ ಇತ್ತೀಚಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಸಂತ್ರಸ್ತೆಯ ತಂದೆ ತಮ್ಮ ಮಗಳು ಕಾಣೆಯಾದ ಎಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಿದ್ದರು.
ಈ ವೇಳೆ, ಅಪರಾಧಿಯು ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ, ಶಿವಮೊಗ್ಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದು ಬಯಲಾಗಿತ್ತು. ಸಾಕ್ಷ್ಯಾಧಾರಗಳನ್ನು ಆಧರಿಸಿ ಅಪರಾಧಿಗೆ ದಂಡ ಸಮೇತ ಜೈಲು ಶಿಕ್ಷೆ ವಿಧಿಸಿದ್ದ ನ್ಯಾಯಾಲಯವು ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆಯೂ ತೀರ್ಪು ನೀಡಿತ್ತು.