ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಪರಿಸ್ಥಿತಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವಂತಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರ ಪರಿಹಾರ ಕೋರಿ ಸುಪ್ರೀಂಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿ, ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಸುಪ್ರೀಂಕೋರ್ಟ್ಗೆ ಹೋಗೋ ನಾಟಕ ಮಾಡಿದ್ದಾರೆ. ನೀತಿಸಂಹಿತೆ ಜಾರಿ ನಂತರ ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ, ಇಲ್ಲಿವರೆಗೆ ನಿದ್ದೆ ಮಾಡ್ತಿದ್ರಾ?. ಈ ರಾಜಕಾರಣ ಮೂಲಕ ಚುನಾವಣೆ ಗೆಲ್ಲಬಹುದು ಅನ್ನೋದು ಅವರ ಭ್ರಮೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಆರ್ಥಿಕ ಇಲಾಖೆ ದಾಖಲೆಗಳಲ್ಲಿ ಕೇಂದ್ರ ಜಿಎಸ್ಟಿ ಪರಿಹಾರ ಕೊಟ್ಟಿದೆ ಅಂತಾರೆ. ಆದರೆ ಬೀದಿಯಲ್ಲಿ ಕೊಟ್ಟಿಲ್ಲ ಅಂತ ಭಾಷಣ ಮಾಡ್ತಾರೆ. ತಮ್ಮ ವೈಫಲ್ಯ, ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಆರೋಪ ಮಾಡ್ತಿದ್ದಾರೆ. ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲು ಮೂರು ತಿಂಗಳ ಕಾಲ ತೆಗೆದುಕೊಳ್ತು. ಬೇಗನೇ ಘೋಷಣೆ ಮಾಡಬಹುದಿತ್ತು. ಮೊದಲು ಬರ ನಿರ್ವಹಣೆಗೆ ಕಾಂಗ್ರೆಸ್ ರಾಜ್ಯ ಸರ್ಕಾರ ಏನು ಮಾಡಿದೆ ಅಂತ ಬಹಿರಂಗಪಡಿಸಲಿ. ಈ ಸರ್ಕಾರಕ್ಕೆ ಹೃದಯ, ಮಾನವೀಯತೆ, ಕಾಳಜಿ ಇದ್ದಿದ್ರೆ ಸಮರೋಪಾದಿಯಲ್ಲಿ ಬರ ನಿರ್ವಹಣೆ ಮಾಡಬಹುದಿತ್ತು. ಅದರ ಬದಲು ಕಾಂಗ್ರೆಸ್ ಸುಪ್ರೀಂಕೋರ್ಟ್ಗೆ ಹೋಗಿ ಚುನಾವಣಾ ರಾಜಕೀಯ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ಬರ ಪರಿಹಾರ ಎಷ್ಟು ಬರಬೇಕೋ ಅದು ಬಂದೇ ಬರುತ್ತೆ. ಕೇವಲ 217 ಕೋಟಿ ಅಷ್ಟೇ ರಾಜ್ಯ ಬರ ಪರಿಹಾರ ಬಿಡುಗಡೆ ಮಾಡಿದೆ. ಈ ಸರ್ಕಾರ ಜನರ ನೆರವಿಗೆ ಬರುವುದರಲ್ಲಿ ಸಂಪೂರ್ಣ ವಿಫಲ ಆಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ: ಸಿ.ಎಂ ಸಿದ್ದರಾಮಯ್ಯ - Loksabha Election